
ಸಕಲೇಶಪುರ : ಹಾಸನ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಗಜಪಡೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಗೊದ್ದು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆನಂದ್ ಎಂಬುವವರಿಗೆ ಸೇರಿದ ಕಾಫಿ ತೋಟಕ್ಕೆ ದಾಂಗುಡಿ ಇಟ್ಟಿರುವ ಕಾಡಾನೆಗಳು ಫಸಲು ಬಿಟ್ಟಿದ್ದ ಕಾಫಿ ಗಿಡಗಳು, ಗೊನೆ ಬಿಟ್ಟಿದ್ದ ಬಾಳೆ, ನೀರಿನ ಪೈಪ್‌ಗಳನ್ನು ಸಂಪೂರ್ಣ ನಾಶ ಮಾಡಿವೆ.
ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡ ರೈತ ಕಂಗಾಲಾಗಿ ಹೋಗಿದ್ದಾನೆ. ಕಾಡಾನೆಗಳು ನಾಶ ಮಾಡಿರುವ ಬೆಳೆಯ ವಿಡಿಯೋ ಮಾಡಿ ಆನಂದ್ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸುವಂತೆ ಆಗ್ರಹಿಸಿದ್ದು, ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಒತ್ತಾಯಿಸಿದ್ದಾರೆ.


