
ನಿಲ್ಲದ ಕಾಡಾನೆ ರಂಪಾಟ ಫಸಲಿಗೆ ಬಂದ ಕಾಫಿಗಿಡಗಳು ಧ್ವಂಸ
ಅರೇಹಳ್ಳಿ: ಕಷ್ಟ ಪಟ್ಟು ಬೆಳೆದಿರುವ ಕಾಫಿಗಿಡಗಳನ್ನು ಕಾಡಾನೆಗಳ ಹಿಂಡು ತುಳಿದು ಧ್ವಂಸ ಮಾಡಿದ್ದು ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಿದೆ ಎಂದು ರೈತ ಜಗದೀಶ್ ನೊಂದು ನುಡಿದರು.
ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಪಂ ವ್ಯಾಪ್ತಿಯ ಕಿತ್ತಾವರ ಗ್ರಾಮದಲ್ಲಿ ಕಾಡಾನೆಗಳ ಸಂಚಾರ ಮಿತಿಮೀರಿದ್ದು ರೈತರ ಜಮೀನುಗಳಿಗೆ ನುಗ್ಗಿ ನಾನಾ ಬೆಳೆಗಳನ್ನು ನಾಶಪಡಿಸುತ್ತಿದೆ. ಈ ವೇಳೆ ಮಾತನಾಡಿದ ಅವರು, ಕಾಫಿಗಿಡಗಳು ಫಸಲು ನೀಡಬೇಕಾದರೆ ನಾಲ್ಕೈದು ವರ್ಷಗಳು ಅದರ ಹಿಂದೆ ಬೀಳಬೇಕಾಗಿದೆ. ಹೀಗೆ ಫಸಲಿಗೆ ಬಂದ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕುತ್ತಿರುವುದರಿಂದ ದಿಕ್ಕೆ ತೋಚದಂತಾಗಿದೆ.
ಇಷ್ಟು ಸಾಲದೆಂಬಂತೆ ಎಪ್ಪತ್ತು ಸಾವಿರ ಖರ್ಚು ಮಾಡಿ ನಿರ್ಮಿಸಿದ್ದ ಚಿಕ್ಕ ಕೆರೆಯ ಏರಿಯನ್ನು ಸಹ ತುಳಿದು ಹಾಳು ಮಾಡಿದೆ. ಪಕ್ಕದ ಜಾಗದಲ್ಲಿ ಹೊಸದಾಗಿ ಹಾಕಲಾಗಿದ್ದ ಗಿಡಗಳನ್ನು ಕಾಡಾನೆಗಳು ತುಳಿದು ಹಾಳು ಮಾಡಿದೆ. ಆದ್ದರಿಂದ ಸರಕಾರ ಹಾಗೂ ಅರಣ್ಯ ಇಲಾಖೆಯು ಇತ್ತ ಗಮನಹರಿಸಿ ನಷ್ಟಗೊಂಡ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
