ಅರೇಹಳ್ಳಿ : ತನ್ನ ಮರಿ ಸತ್ತು ಮೂರು ದಿನ ಕಳೆದರೂ ತಾಯಿಯಾನೆ ತಾನು ಹೋದಲೆಲ್ಲಾ ಮೃತ ಮರಿಯಾನೆಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್ನಳ್ಳಿ ಎಸ್ಟೇಟ್ ಬಳಿ ನಡೆದಿದೆ.

ಘಟನೆ ಹಿನ್ನೆಲೆ: ಕಳೆದ ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿಯು ಸ್ಥಳದಲ್ಲೆ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಎಂಥ ಕಲ್ಲು ಮನಸ್ಸಿನವರಿಗೂ ಕರುಳು ಚುರುಕ್ ಎನ್ನುವಂತಿದೆ ಈ ದೃಶ್ಯಾವಳಿ. ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ.

ಭಾನುವಾರವಷ್ಟೆ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆಯೂ ಸಹ ಮೃತಪಟ್ಟಿತ್ತು.

ಈ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.

ಹೇಳಿಕೆ: “ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿಯಾನೆ ತೆರಳುತ್ತಿರುವುದು ಬೇಸರ ತಂದಿದೆ. ಹೀಗಾಗಿ ಸಿಬ್ಬಂದಿಗಳನ್ನು ಹತ್ತಿರ ಹೋಗಲು ಬಿಡುತ್ತಿಲ್ಲ. ಮರಿ ವಾಸನೆ ಬಂದರೆ ತಾಯಿಯಾನೆ ತನ್ನಿಂತಾನೆ ಬೇರೆಯಾಗುತ್ತದೆ.” -ಯತೀಶ್, ಆರ್‌ಎಫ್‌ಒ, ಬೇಲೂರು

ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಶಿರಗುರ ಗ್ರಾಮ ವ್ಯಾಪ್ತಿಯ ಜಾಕ್ನಳ್ಳಿ ಎಸ್ಟೇಟ್ ಬಳಿ ಮೃತ ಮರಿಯನ್ನು ಸೊಂಡಿಲಿನಿAದ ಬದುಕಿಸುವ ಪ್ರಯತ್ನ ಮಾಡುತ್ತಿರುವ ತಾಯಿಯಾನೆಯ ಸ್ಥಿತಿ ಮರುಕ ಹುಟ್ಟಿಸುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *