ಸಕಲೇಶಪುರ : ಇತಿಹಾಸ ಪ್ರಸಿದ್ಧ ಶ್ರೀ ಸಕಲೇಶ್ವರ ಸ್ವಾಮಿ ರಥೋತ್ಸವ ಹಾಗೂ ವಸ್ತು ಪ್ರದರ್ಶನ ಕ್ರಮೇಣವಾಗಿ ಕಳೆಗುಂದುತ್ತಾ ಬರುತ್ತಿದೆ.ಶತಮಾನಗಳಿಂದ ನಡೆದು ಬಂದ, ವಸ್ತು ಪ್ರದರ್ಶನ ಜಾತ್ರೆಯ ಮೈದಾನದ ಮಾಲೀಕತ್ವದ ತಕರಾರಿನಿಂದ ಈಗ ಸ್ಥಳೀಯ ಆಡಳಿತ ಜಾತ್ರೆ ನಡೆಸಲು ಖಾಸಗಿ ವ್ಯಕ್ತಿಗಳ ಬಳಿ ಸ್ಥಳ ಭಿಕ್ಷೆ ಬೇಡಬೇಕಾದ ದುಸ್ಥಿತಿಗೆ ತಲುಪಿದೆ.

ನೂರಾರು ವರ್ಷಗಳಷ್ಟು ಹಳೆಯದಾದ ವಿಶಾಲ ವೃಕ್ಷಗಳ ನೆರಳಿನಲ್ಲಿ ನಡೆಯುತ್ತಿದ್ದ ಸಂತೆ ಹಾಗೂ ಜಾತ್ರೆ ಈಗ ಇತಿಹಾಸದ ಪುಠ ಸೇರಿವೆ.ಆದರೆ ಈ ಜಾಗದಲ್ಲಿ ನಗರದ ಕಸ ಸಂಗ್ರಹಣೆ ಮಾಡಿದ್ದು, ಪಕ್ಕದಲ್ಲಿಯೇ ಇರುವ ಕ್ರೀಡಾಂಗಣ ಹಾಗೂ ಸಾರಿಗೆ ಡಿಪೋ ಮತ್ತು ಗ್ಯಾರೇಜ್ ಮಳಿಗೆಗಳಿಗೆ ದುರ್ವಾಸನೆಯ ಕೊಡುಗೆ ನೀಡುತ್ತಿದೆ ನಮ್ಮ ಪುರಸಭೆ.

ಮಳೆಗಾಲದ ನೀರಿಗೆ ಕಸದ ರಾಶಿಯ ಕೊಳಚೆ ಕೊಂಡು ಹೋಗಿ ಸೇರಿ ಪವಿತ್ರ ಹೇಮಾವತಿ ಒಡಲಿಗೆ ದುರ್ಗಂಧದ ನೀರು ಸೇರುತ್ತಿರುವುದು ನಮ್ಮ ಸ್ಥಳೀಯ ಆಡಳಿತದ ಕಾಣಿಕೆ.

ಇದು ನಮ್ಮ ನಗರಕ್ಕೆ ನೀರುಣಿಸುವ ಹೇಮಾವತಿಗೆ ನಾವು ಸಲ್ಲಿಸುತ್ತಿರುವ ಕೃತಜ್ಞತೆ.ದಿನೇ ದಿನೇ ಬೆಳೆಯುತ್ತಿರುವ ಸಕಲೇಶಪುರ ಪುರಸಭೆ ವ್ಯಾಪ್ತಿಗೆ ಹತ್ತಾರು ಹಳ್ಳಿಗಳನ್ನು ಸೇರಿಸಿ ವಿಸ್ತರಣೆ ಮಾಡುವ ಯೋಜನೆ ಈಗ ಇದೆ.ಅದಕ್ಕೂ ಮೊದಲು ಸಕಲೇಶಪುರ ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಆಗಬೇಕು.ಇಲ್ಲದೆ ಹೋದಲ್ಲಿ ಈಗಾಗಲೇ ಗಬ್ಬೆದ್ದು ನಾರುತ್ತಿರುವ ಸಂತೆ ಮೈದಾನಕ್ಕೆ ಇನ್ನಷ್ಟು ಕಸ ಸೇರಿ ಇಡೀ ಸಕಲೇಶಪುರಕ್ಕೆ ದುರ್ಗಂಧದ ಅಭಿಷೇಕ ಆಗುವುದರಲ್ಲಿ ಸಂಶಯ ಇಲ್ಲ.

ಈ ಕೂಡಲೇ ಜಿಲ್ಲಾಡಳಿತ ಈ ಕುರಿತು ಗಮನ ಹರಿಸಿ ಸಕಲೇಶಪುರದ ಕ್ರೀಡಾಂಗಣ / ಬಸ್ ಡಿಪೋ ಹಾಗೂ ಸುತ್ತಲಿನ ಆವರಣದ ಸ್ವಚ್ಟತೆಗೆ ಮುಂದಾಗುವಂತೆ ಸ್ಥಳೀಯ ಆಡಳಿತಕ್ಕೆ ಚುರುಕು ಮುಟ್ಟಿಸಬೇಕೆಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *