ಧರ್ಮಸ್ಥಳ ಗ್ರಾಮದಲ್ಲಿ ಹೂಳಲಾಗಿದೆ ಎನ್ನಲಾದ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆಗೆ ನೀರಿನ ಒರತೆ ಅಡ್ಡಿಯಾಗಿದ್ದು, ಈ ಹಿನ್ನೆಲೆ ಮಣ್ಣು ಅಗೆಯಲು ಜೆಸಿಬಿ ಸಹಾಯ ಪಡೆಯಲಾಗಿದೆ ಎಂಬ ಮಾಹಿತಿ ದೊರೆತಿದೆ.

ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ ನೇತ್ರಾವತಿ ಸ್ನಾನ ಘಟ್ಟದ ಪಕ್ಕದಲ್ಲೇ ಇದೆ. ನದಿಗೂ ಈ ಜಾಗಕ್ಕೂ ಕೇವಲ 10 ಮೀಟರ್ ಅಂತರವಿದ್ದು, ಭೂಮಿಯನ್ನು ಅಗೆದಂತೆಲ್ಲಾ ನೀರು ಒಸರುತ್ತಿದೆ. ಹಾಗಾಗಿ ಜೆಸಿಬಿಯನ್ನು ಸ್ಥಳಕ್ಕೆ ತರಿಸಿ ಅಗೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ದೂರುದಾರ ತೋರಿಸಿದ ಮೊದಲ ಜಾಗದಲ್ಲಿ ಭೂಮಿಯನ್ನು ಅಗೆಯುವ ಕಾರ್ಯವನ್ನು ಮಧ್ಯಾಹ್ನ 12 ಗಂಟೆ ವೇಳೆಗೆ ಆರಂಭಿಸಲಾಗಿತ್ತು. ಸುಮಾರು 3 ಅಡಿ ಆಳದವರೆಗೆ ಅಗೆಯಲಾಗಿತ್ತು. ಆದರೆ, ಶವ ಹೂತು ಹಾಕಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ ಎನ್ನಲಾಗಿದೆ. ಅಲ್ಲದೆ, ಇನ್ನಷ್ಟು ಮಣ್ಣು ಅಗೆಯಲು ನೀರಿನ ಒರತೆ ಅಡ್ಡಿಯಾಗಿದೆ.

ಸಾಕ್ಷಿ ದೂರುದಾರನಿಗೆ ಸಂತೃಪ್ತಿಯಾಗುವವರೆಗೆ ಹಾಗೂ ನಮಗೆ ಇನ್ನು ಅಗೆಯುವ ಅಗತ್ಯವಿಲ್ಲ ಎಂದು ಮನವರಿಕೆ ಆಗುವವರೆಗೆ ಅಗೆಯುವ ಕಾರ್ಯ ಮುಂದುವರಿಸಲಿದ್ದೇವೆ. ಒಂದು ಜಾಗದಲ್ಲಿ ಅಗೆಯುವ ಕಾರ್ಯವನ್ನು ಪೂರ್ಣಗೊಳಿಸದ ಬಳಿಕವೇ ಎರಡನೇ ಜಾಗದಲ್ಲಿ ಅಗೆಯುವ ಕಾರ್ಯ ಆರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಕನ್ನಡ ಪ್ಲಾನೆಟ್ ವರದಿ ಮಾಡಿದೆ.

ಎಸ್‌ಐಟಿಯ ಡಿಐಜಿ ಎಂ.ಎನ್ ಅನುಚೇತ್ ಹಾಗೂ ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದು ವರದಿ ತಿಳಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *