ನನ್ನ ಸ್ನೇಹಿತ ಬಳಗದ ಹಲವು ಹಿರಿಯ ಅಧಿಕಾರಿಗಳು, ಹಿತೈಷಿಗಳು ಧರ್ಮಸ್ಥಳದ ಕುರಿತು ಒಬ್ಬ ಪೊಲೀಸ್ ಅಧಿಕಾರಿಯಾಗಿ ನಿಮ್ಮ ಅಭಿಪ್ರಾಯ ಏನು ಎಂದು ಕೇಳುತ್ತಾರೆ. ನಾನು ಅನಿಸಿಕೆ ಹೇಳುವುದಕ್ಕೆ ಅಭ್ಯಂತವಿಲ್ಲ. ಒಟ್ಟಾರೆಯಾಗಿ ಗೊಂದಲ ಮತ್ತು ತಿರುವುಗಳು ಇರುವ ಈ ಪ್ರಕರಣದಲ್ಲಿ ಮಾತನಾಡುವುದೇ ಅಪರಾಧ ಎನ್ನುವ ಭಯ ನನಗೂ ಇದೆ. ಪರ ಮತ್ತು ವಿರೋಧವು ವ್ಯಾಪಕ ಪ್ರಶ್ನೆ ಮತ್ತು ಸವಾಲುಗಳನ್ನು ನನ್ನ ವಿರುದ್ಧ ಸೃಷ್ಟಿಸುತ್ತದೆ, ಟೀಕೆ ಮತ್ತು ಅಪವಾದಗಳನ್ನು ಎದುರಿಸಲಾಗುತ್ತದೆ ಎಂದು ನನಗೆ ತಿಳಿದಿದೆ.

ಒಂದು ರೀತಿಯಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಸಿಕ್ಕಿ ಹಾಕಿ ಕೊಡಂತಹ ಅನುಭವ. ಆದರೆ, ಈ ಸಂದರ್ಭದಲ್ಲಿ ದೀರ್ಘ ಮೌನವಾಗಿರುವುದಕ್ಕೆ ಮನಸು ಒಪ್ಪದೇ ಈ ಅನಿಸಿಕೆ ಬರೆದಿದ್ದೇನೆ. ಧರ್ಮಸ್ಥಳ ಡಾ. ಶ್ರೀ ವೀರೇಂದ್ರ ಹೆಗಡೆಯವರ ಕೈಯಿಂದ ವಿದ್ಯಾರ್ಥಿ ವೇತನ ಪಡೆದು ನಾನು ಕಲಿತವನು. ನನ್ನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಜೊತೆ ನನ್ನ ಪ್ರತಿ ಬೆಳವಣಿಗೆಯಲ್ಲಿ ನನಗೆ ಪ್ರೋತ್ಸಾಹ ನೀಡಿದವರು. ಇಂದು ಧರ್ಮಸ್ಥಳ ದೇವಸ್ಥಾನದ ಅಧೀನ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳಿಂದ ನೆರವು ಪಡೆದು ಸಾವಿರಾರು ಜನರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಕಾಣುತ್ತೇವೆ.

ಇಂದು ಉನ್ನತ ಸ್ಥಾನಗಳಲ್ಲಿ ಎಸ್.ಡಿ.ಎಂ ನಲ್ಲಿ ಕಲಿತವರು ಇದ್ದಾರೆ. ರಾಜಕೀಯ, ದಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಅದಕ್ಕಿಂತಲೂ ಮಿಗಿಲಾಗಿ ಲಕ್ಷಾಂತರ ಜನರ ಭಕ್ತಿಯ ಕ್ಷೇತ್ರವಾಗಿ ಧರ್ಮಸ್ಥಳ ಬೆಳೆದು ನಿಂತಿದೆ. ಕರ್ನಾಟಕ ರಾಜ್ಯದ ವಿಧಾನ ಸಭಾ ಸ್ಪೀಕರ್ ಶ್ರೀಯುತ ಯುಟಿ ಖಾದರ್ ಸಾಬ್ ಕೂಡ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಕಲಿತವರು. ಜನರ ಆತ್ಮೀಯ, ಆಧ್ಯಾತ್ಮಿಕ ಕ್ಷೇತ್ರದ ಸುತ್ತ ಆರೋಪ ಮತ್ತು ಅನುಮಾನಗಳು ಸೃಷ್ಠಿಸುವ ಪ್ರಯತ್ನಗಳಿಗೆ ಪೂರ್ಣ ವಿರಾಮ ಹಾಕಲು ಸನ್ಮಾನ್ಯ ಗೃಹಮಂತ್ರಿಗಳಾದ ಶ್ರೀ ಜಿ. ಪರಮೇಶ್ವರ್ ರವರು ಎಸ್. ಐ.ಟಿ ರಚಿಸಿ ಅದಕ್ಕೆ ಸಂಪೂರ್ಣ ಪ್ರೀ ಹ್ಯಾಂಡ್ ನೀಡಿದ್ದಾರೆ. ಈ ನಡುವೆ ಅವರು ವಿಧಾನ ಸಭೆಯಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ ಒಂದು ತಾರ್ಕಿಕ ಅಂತ್ಯ ಕೊಡಲಿದ್ದೇವೆ.

ನ್ಯಾಯದ ಹೊರತಾದ ಯಾವುದೇ ಪರಿಹಾರ ಇಲ್ಲಿ ಇರುವುದಿಲ್ಲ. ತಪ್ಪು ಯಾರಿಂದ ಸಂಭವಿಸಿದರೂ ಅದು ಕಾನೂನು ಕ್ರಮಕ್ಕೆ ಅರ್ಹ ಆಗಿರುತ್ತದೆ. ಶ್ರೀಕ್ಷೇತ್ರದ ಬಗ್ಗೆ ನಮಗೆಲ್ಲ ಪೂಜನೀಯ ಭಾವನೆ ಇದೆ, ಬಂದಿರುವ ಆರೋಪಗಳ ಬಗ್ಗೆ ನಮಗೂ ಗಂಭೀರ ಆಲೋಚನೆಗಳು ಇದೆ. ತನಿಖೆಯಲ್ಲಿ ಎಲ್ಲಾ ಸತ್ಯವು ಹೊರ ಬರಲಿದೆ ಎಂದಿದ್ದರು. ಈಗ ನನಗೆ ಏನು ಇದರಲ್ಲಿ ಹೆಚ್ಚಿನದು ಮಾತನಾಡಲು ಇರುವುದಿಲ್ಲ. ನನ್ನ ಆತ್ಮೀಯರೊಬ್ಬರು ಕರೆ ಮಾಡಿ, ಮುಸ್ಲಿಮರು ಈ ಪ್ರಕರಣದಲ್ಲಿ ಮೌನವಾಗಿರುವುದಕ್ಕೆ ನೀವೆಲ್ಲ ನಾಯಕರು ಒತ್ತಾಯಿಸಬೇಕು ಎಂದರು. ಕರೆ ಮಾಡಿದವರು ಒಬ್ಬ ಮುಸ್ಲಿಂ ಪತ್ರಕರ್ತ. ನಾನು ಅವರಿಗೆ ಪ್ರಶ್ನಿಸಿದೆ, ನಮ್ಮ ಸಮುದಾಯದ ಯಾವುದೇ ನಾಯಕರು, ಉಲೇಮಾ ವಿದ್ವಾಂಸರು, ಖಾಜಿಗಳು ಈ ಬಗ್ಗೆ ಮಾತನಾಡಿದ್ದಾರೆಯೇ ? ಇಲ್ಲಾ ಎನ್ನುವ ಉತ್ತರ ಬಂತು.

ಕೆಲವು ಮುಸ್ಲಿಂ ಸಾಮಾಜಿಕ ಹೋರಾಟಗಾರರು, ರಾಜಕೀಯ ಹಿನ್ನಲೆಯವರು, ವೃತ್ತಿಪರ ಮುಸ್ಲಿಂ ಪತ್ರಕರ್ತರು ಈ ಬಗ್ಗೆ ಮಾತನಾಡಿದ್ದನ್ನು ತಡೆಯಲು ಹೇಗೆ ಸಾಧ್ಯ ? ನಾನು ವೈಯುಕ್ತಿಕವಾಗಿ ಮೌನ ಪಾಲಿಸಿದ್ದೇನೆ. ಮುಸ್ಲಿಮರು ಈ ಪ್ರಕರಣದಿಂದ ಅಂತರ ಕಾಯ್ದುಕೊಂಡು ವೀಕ್ಷಕರಾಗಿ ಇರುವುದು ಜಾಣತನ. ಕೆಲವರು ಮುಸ್ಲಿಂ ಸಮಾಜವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರ ಹಿಂದೆ ರಾಜಕೀಯ ಇಚ್ಛಾಶಕ್ತಿ ಮತ್ತು ಷಡ್ಯಂತ್ರವಿದೆ. ಮುಸ್ಲಿಮರ ಮೇಲಿನ ಆರೋಪವನ್ನು ಸ್ವತಃ ಡಾ. ವೀರೇಂದ್ರ ಹೆಗ್ಗಡೆಯವರೂ ಒಪ್ಪಲಾರರು. ಅವರು ಮುಸ್ಲಿಂ ಸಮಾಜದ ವಿರುದ್ಧ ಒಂದು ಶಬ್ಧ ಎತ್ತಿದವರಲ್ಲ. ಯಾವುದೇ ರಾಜಕೀಯ ಮತ್ತು ಸೈದ್ಧಾಂತಿಕ ಸಂಘಟನೆಗಳನ್ನು ಪ್ರತಿನಿಧಿಸಿದವರೂ ಅಲ್ಲ. ಅವರು ಮುಸ್ಲಿಂ ಸಮಾಜಕ್ಕೆ ಉಪಕಾರ ಮಾಡಿದ ಬಹಳಷ್ಟು ಉದಾಹರಣೆಗಳು ಇದೆ.

ಕ್ಷೇತ್ರದ ಅಧೀನದ ಯಾವುದೇ ಸಂಸ್ಥೆಯಲ್ಲಿ ಅವರು ತಾರತಮ್ಯ ಮಾಡಿದ ಒಂದೇ ಒಂದು ಉದಾಹರಣೆ ನೀಡಲು ಯಾರಿಗೂ ಸಾಧ್ಯವಿಲ್ಲ. ಎಸ್.ಡಿ.ಎಂ ಲಾ ಕಾಲೇಜಿನಲ್ಲಿ ಕಲಿತ ಮುಸ್ಲಿಮರು ಕಾನೂನು ವೃತ್ತಿ ಮಾಡುತ್ತಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದನ್ನು ಸ್ಮರಿಸದೆ ಇರಲು ಸಾಧ್ಯವಿಲ್ಲ. ಹಿಂದುಳಿದ ಬೆಳ್ತಂಗಡಿ ತಾಲೂಕಿನ ಅದೆಷ್ಟೋ ಮುಸ್ಲಿಂ ಸಂಸಾರಗಳಿಗೆ ಕ್ಷೇತ್ರದ ವಿವಿಧ ಯೋಜನೆಗಳ ನೆರವು ಸಿಕ್ಕಿದೆ. ಮುಸ್ಲಿಂ ಎಂಬ ಕಾರಣಕ್ಕೆ ವಿರೋಧಿಸಿದ, ಪ್ರಯೋಜನ ನಿರಾಕರಿಸಿದ, ನಿರ್ಲಕ್ಷಿಸಿದ ಯಾವುದೇ ಘಟನೆಯೂ ನನ್ನ ಗಮನಕ್ಕೆ ಬಂದಿಲ್ಲ.

ಈ ಸಂದರ್ಭದಲ್ಲಿ ಇದೆಲ್ಲಾ ಏಕೆ ತಾವು ಉಲ್ಲೇಖಿಸುತ್ತಿದ್ದೀರಿ ಎಂದು ಪ್ರಶ್ನಿಸಲು ಮತ್ತು ಇದರ ಮೂಲಕ ಅಲ್ಲಿ ಆಗಿರುವ ತಪ್ಪುಗಳನ್ನು ಮರೆಮಾಚುವ ಪ್ರಯತ್ನ ನಿಮ್ಮದು ಎಂದು ನನ್ನಲ್ಲಿ ಕೇಳುತ್ತೀರಿ ಎಂದು ನನಗೆ ಗೊತ್ತಿದೆ. ನಾನು ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ವರ್ಷ ಸೇವೆ ಮಾಡಿದವನು. ಎಷ್ಟೇ ದೊಡ್ಡ ಶಿಫಾರಸು ಇರುವವನು ಅಥವಾ ಬಲಾಢ್ಯನಿಗೂ ನೂರಾರು ಕೊಲೆ ಅಥವಾ ಅತ್ಯಾಚಾರ ಮಾಡಲು ದೈರ್ಯ ಬರುವುದಕ್ಕೆ ಸಾಧ್ಯವಿಲ್ಲ. ಒಂದು ಎರಡು ಪ್ರಕರಣ ಆದಾಗಲೇ ಅದು ಹೊರಕ್ಕೆ ಬರುತ್ತದೆ. ಕ್ರೈಮ್ ಮಾಡುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಮಾಡಿ ರಾಜಾರೋಷವಾಗಿ ಇರುವುದಾದರೆ ಇಂದು ಅದೆಷ್ಟೋ ಬಲಾಢ್ಯರು ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಹಿರಿಯ ಅಧಿಕಾರಿಯೊಬ್ಬರು ಒಂದು ಅಭಿಪ್ರಾಯ ಹೇಳಿದರು, ಲಕ್ಷಾಂತರ ಭಕ್ತರು ಬರುತ್ತಾರೆ, ಇಲ್ಲಿ ಸಾವುಗಳು, ಆತ್ಮಹತ್ಯೆಗಳು ನಡೆದಿದೆ. ಸರಕಾರಿ ನಿಯಮಗಳನ್ನು ಪಾಲಿಸದೇ ಶವಸಂಸ್ಕಾರ ಮಾಡಿರಲೂ ಬಹುದು. ಈ ನಿಯಮ ಉಲ್ಲಂಘನೆಯು ಧರ್ಮಸ್ಥಳದ ಪ್ರತಿಷ್ಠೆಯ ಧೈರ್ಯದಿಂದ ಅಧಿಕಾರಿಗಳು ಮಾಡಿರಬಹುದು. ಎಲ್ಲಿಯಾದರೂ ಇವರು ಆರೋಪಿಸುವಂತೆ ಇದ್ದಿದ್ದರೆ ಇಂದು ರಾಜ್ಯದ ಮೂಲೆ ಮೂಲೆಯಲ್ಲೂ ಸಂತ್ರಸ್ತರಿಂದ ಕೇಸು ದಾಖಲು ಆಗುತ್ತಿತ್ತು. ಸಿಕ್ಕಿದ ಸಮಯವನ್ನು ಅನ್ಯಾಯವನ್ನು ಹೇಳಿಕೊಳ್ಳಲು ಸರತಿ ಸಾಲಿನಲ್ಲಿ ಬರುತ್ತಿದ್ದರು.

ಈ ಸಾಮಾಜಿಕ ಮಾಧ್ಯಮ, ವಾಟ್ಸಾಪ್ ಗಳಲ್ಲಿ ಯಾವುದೇ ಬರಹ, ವಾಯ್ಸ್, ಕಾಮೆಂಟ್ ಗಳಿಗೆ ಈಗ ಯಾವುದೇ ಮಹತ್ವ ಇರುವುದಿಲ್ಲ. ಅದು ಗೊಂದಲ ಮತ್ತು ಆತಂಕ ನಿರ್ಮಿಸುವುದೇ ಹೊರತು ಪ್ರಸ್ತುತ ಈ ಪ್ರಕರಣಕ್ಕೆ ಯಾವುದೇ ಪರ್ಯಾಯ ನ್ಯಾಯ ವ್ಯವಸ್ಥೆಯನ್ನು ನಿರ್ಮಿಸುವುದಿಲ್ಲ. ಹಾಗಾಗಿ ಸ್ವಲ್ಪ ತಾಳ್ಮೆಯಿಂದ ಕಾಯುವುದು ಉತ್ತಮ.ಒಟ್ಟು ಪ್ರಕರಣದ ಸಾರಾಂಶ ಕೇಳಿದೆ. ಪ್ರತೀ ದಿನ ಒಂದೊಂದು ತಿರುವುಗಳು. ಇದೊಂದು ರೀತಿಯಲ್ಲಿ ಯುದ್ಧ ಗೆಲ್ಲುವ ಉತ್ಸಾಹದ, ಜಿದ್ದು, ಹಠ ಮತ್ತು ಪಾಠ ಕಲಿಸುತ್ತೇವೆ ಎನ್ನುವ ಹಂತಕ್ಕೆ ಬಂದು ನಿಂತಿದೆ. ಅದಕ್ಕೆ ಮನರಂಜನೆ ನೀಡಲು ಮಾಧ್ಯಮಗಳ ಮತ್ತು ಯು ಟೂಬರ್ ಗಳ ಪೈಪೋಟಿ. ಒಂದು ಕಡೆ ಸೈಲೆಂಟಾಗಿ ಪ್ರಕರಣದ ತನಿಖೆಯನ್ನು ಎಸ್. ಐ. ಟಿ ಮಾಡುತ್ತಿದೆ. ಎರಡೂ ಭಾಗದ ಹೋರಾಟಗಾರರು ಇದನ್ನು ನ್ಯಾಯಯುತವಾಗಿ ತನಿಖೆ ಆಗುತ್ತಿದೆ ಎಂದು ಒಪ್ಪುತ್ತಾರೆ. ವರದಿ ಬರುವ ಮೊದಲೇ ನಾವು ಏಕೆ ಆತುರ ತೋರಿಸಬೇಕು ? ಧರ್ಮ ಸ್ಥಳ ಪ್ರಕರಣವು ಒಂದು ಹಂತದಲ್ಲಿ ಕರ್ನಾಟಕ ಜನರನ್ನೇ ಗೊಂದಲದಲ್ಲಿ ಸೇರಿಸಿದೆ. ಇದಕ್ಕೆ ಕಾರಣ ಎರಡೂ ಕಡೆಯ ಹೋರಾಟಗಾರರು ಮತ್ತು ಮಾಧ್ಯಮಗಳು.

ಇಲ್ಲಿ ಎರಡೂ ಭಾಗದ ಹೋರಾಟಗಾರರಿಗೂ ನ್ಯಾಯ ಮತ್ತು ನೀತಿಗಿಂತ ಹೆಚ್ಚು, ತಕ್ಷಣ ಪ್ರತಿಕ್ರಿಯೆ ಮಾಡಿ ಯಾರನ್ನೋ ಓಲೈಸುವ, ಹೀರೋ ಆಗುವ, ಕೋಪ ತೀರಿಸುವ ಹಂತಕ್ಕೆ ಪ್ರಕರಣ ಬಂದು ನಿಂತಿದೆ. ಇಲ್ಲಿ ಹಲವು ವಿವಿಧ ಹೋರಾಟದ ಸ್ಪರ್ಧೆ ಇದೆ. ಸ್ವಾರ್ಥ ಹಿತಾಸಕ್ತಿ, ದ್ವೇಷ, ಧರ್ಮ ರಕ್ಷಣೆಯ ಸೋಗು, ರಾಜಕೀಯ ಪೈಪೋಟಿ, ಬೂಟಾಟಿಕೆ ಎಲ್ಲಕ್ಕಿಂತಲೂ ಮಿಗಿಲಾಗಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುವ ಉನ್ಮಾದ ಇದೆ. ಇದೆಲ್ಲವೂ ಅಪರಾಧ ಮತ್ತು ಆರೋಪವನ್ನು ಆಯುಧವಾಗಿಸಿ ಪರಸ್ಪರ ಸ್ಪರ್ಧಿಸುವ ಹಂತಕ್ಕೆ ಬಂದಿದೆ.ನಮ್ಮ ಈ ಅನಾರೋಗ್ಯಕರ ಪೈಪೋಟಿ ಒಂದು ಕ್ಷೇತ್ರ, ಒಂದು ಸುಂದರ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಕೆಲವರು ಭ್ರಮೆಯಲ್ಲಿ ಮತ್ತು ಕೆಲವರು ಭಯದಲ್ಲಿ ಇದ್ದಾರೆ. ನನ್ನಂಥವರು ಸಾಮಾಜಿಕ ಸೌಹಾರ್ದತೆಗೆ ಇದು ಕೊಳ್ಳಿ ಇಡುತ್ತದೆಯೋ ಎಂಬ ಆತಂಕ ಇದೆ. ಇದುವರೆಗೂ ಎಲ್ಲಾ ಧರ್ಮೀಯ ಸಮಾಜವನ್ನು ಪ್ರೀತಿಸಿದ ವ್ಯಕ್ತಿಯಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮಾನಸಿಕ ಮತ್ತು ನೈತಿಕ ಧೈರ್ಯ ಕೊಡಲು ಈ ಸಮಯ ಸೂಕ್ತ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿ ದೈರ್ಯ ಮಾಡಿಕೊಂಡು ಈ ಅನಿಸಿಕೆ ಬರೆದಿದ್ದೇನೆ.

ಇತ್ತಿಚೆಗೆ ಮುಸ್ಲಿಂ ಯುವ ನಾಯಕರೊಬ್ಬರ ಪತ್ರಿಕಾಗೋಷ್ಠಿ ನೋಡಿದೆ. ಅದರಲ್ಲಿ ಅವರು ಧರ್ಮಸ್ಥಳದ ಬಗ್ಗೆ ಎಲ್ಲಾ ಮುಸ್ಲಿಮರಿಗೆ ಗೌರವ ಇದೆ. ಮುಂದೆಯೂ ಇರುತ್ತದೆ. ಶ್ರೀ ವೀರೇಂದ್ರ ಹೆಗಡೆಯವರ ಬಗ್ಗೆ ಅಭಿಮಾನ ಮತ್ತು ಪ್ರೀತಿ ಇದೆ ಅದು ಹಾಗೇ ಇರುತ್ತದೆ. ಆದರೆ, ಈ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದನ್ನು ಸಹಿಸುವುದಿಲ್ಲಾ ಎಂದಿದ್ದರು.

ಧರ್ಮಸ್ಥಳ ಕ್ಷೇತ್ರದ ಸುತ್ತಲೂ ನಡೆಯುವ ಆರೋಪಗಳ ಹಿಂದೆ ಇರುವ ಸತ್ಯವನ್ನು ಎಸ್.ಐ.ಟಿ ಹೊರಗೆ ತರಬೇಕು. ಅದು ಯಾರ ಮೇಲೂ ಅನ್ಯಾಯ ಆಗದಂತೆ, ನ್ಯಾಯ ವ್ಯವಸ್ಥೆಯನ್ನು ಜನರು ವಿಶ್ವಾಸ ಮಾಡುವಂತೆ ಇರಬೇಕು. ಕಾರಣ ಇದು ರಾಷ್ಟ್ರದಲ್ಲಿ ಈಗ ದೊಡ್ಡ ಸುದ್ದಿಯಾದ ವಿಷಯ.ನನ್ನ ಬದುಕಲ್ಲಿ ನಾನು ಎಂತೆಂತಹ ಕೇಸನ್ನು ಹ್ಯಾಂಡಲ್ ಮಾಡಿದ್ದೇನೆ. ಈಗ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯ ಇದೆ. ಮಿಗಿಲಾಗಿ ಒಂದು ಕೇಸಿನಲ್ಲಿ ಇಷ್ಟು ಐಪಿಎಸ್ ಅಧಿಕಾರಿಗಳನ್ನು ಸೇರಿಸಿ ತನಿಖೆ ಆಗುತ್ತಿರುವ ರಾಜ್ಯದ ಪ್ರಥಮ ಪ್ರಕರಣ ಇದು. ಎಸ್. ಐ .ಟಿ ಯಲ್ಲಿರುವ ಎಲ್ಲಾ ಅಧಿಕಾರಿಗಳು ನಿಷ್ಟುರ, ಪ್ರಾಮಾಣಿಕ ಮತ್ತು ಅನುಭವಿಗಳು. ಹಾಗಾಗಿ ಈ ತನಿಕೆ ಒಂದು ತಾರ್ಕಿಕ ಅಂತ್ಯ ಕಾಣಲಿದೆ. ಅಲ್ಲಿಯವರೆಗೆ ನಾವು ಮೌನವಾಗಿ ವೀಕ್ಷಕರಾಗುವುದು ಉತ್ತಮ.

*ಜಿ. ಎ. ಬಾವಾ* ನಿವೃತ್ತ ಡಿಸಿಪಿ ಬೆಂಗಳೂರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *