ಸೆಪ್ಟೆಂಬರ್ 13ರಂದು ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆಯಲಿರುವ ಜೀವನಾಡಿ ರಾಜ್ಯಮಟ್ಟದ ಸಾಹಿತ್ಯ ಸಪ್ತಾಹ– 2025ರ ಅಂಗವಾಗಿ, ನನಗೆ ಅತ್ಯಂತ ಹತ್ತಿರವಾದ ಸ್ನೇಹಿತ, ಸಹೋದರಸಮಾನ, ಕಲಾರಂಗದ ಹೊಳೆಯುವ ನಕ್ಷತ್ರ ರವಿಪ್ರಸಾದ್ ಮಂಡ್ಯರ ಪುಣ್ಯಸ್ಮರಣೆ ನಡೆಯಲಿದೆ.ಇದೇ ವೇದಿಕೆಯಲ್ಲಿ ನನ್ನ ಏಳನೇ ಕೃತಿ “*_ವಿಶ್ವಾಸದ ವಿಮರ್ಶೆಗಳು_* “ಕೂಡ ಲೋಕಾರ್ಪಣೆಯಾಗುತ್ತಿದೆ.

ಕಾರ್ಯಕ್ರಮಕ್ಕೆ ನಾಡೋಜ ಡಾ. ಮಹೇಶ ಜೋಶಿ, ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮವನ್ನು ಪ್ರಖ್ಯಾತ ರಂಗನಟ ಶ್ರೀ ಟಿ.ಎನ್. ಸೀತಾರಾಮ್ ಅವರು ಉದ್ಘಾಟಿಸಲಿದ್ದಾರೆ.

ಮಂಡ್ಯ ರವಿ ಸ್ಮರಣಾರ್ಥವಾಗಿ ಅಮೃತಧಾರೆ ಧಾರಾವಾಹಿ ಖ್ಯಾತಿಯ ಶ್ರೀ ರಾಜೇಶ್ ನಟರಂಗ ರವರಿಗೆ *ರಂಗನಟ* ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿ ವಿತರಣೆಯನ್ನು ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಂಡ್ಯ ಜಿಲ್ಲೆ ,ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜೀವನಾಡಿ ವಿಶೇಷ ಸಂಚಿಕೆಯನ್ನು ಸಾಹಿತಿ ಡಾ. ಎಸ್. ಶ್ರೀನಿವಾಸಶೆಟ್ಟಿ ಬಿಡುಗಡೆಗೊಳಿಸಲಿದ್ದು, ಪುಸ್ತಕಗಳ ಬಿಡುಗಡೆ ಕಾರ್ಯವನ್ನು ಮಹಾಕವಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ನೆರವೇರಿಸಲಿದ್ದಾರೆ.

_ಬಾಲ್ಯದಿಂದಲೇ ಹತ್ತಿರವಾದ ನೆನಪುಗಳು_ ರವಿಪ್ರಸಾದ್ ನನ್ನ ಬಾಲ್ಯ ಸ್ನೇಹಿತ. ಶಾಲೆಯ ಮೈದಾನದಿಂದ, ಕಾಲೇಜಿನ ದಿನಗಳಿಂದ, ನಮ್ಮ ಹೃದಯದ ಹಾದಿಗಳವರೆಗೂ ನಾವು ಜೊತೆಗೂಡಿ ಕಳೆದ ಕ್ಷಣಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿವೆ. ಕೇವಲ ಸ್ನೇಹಿತನಷ್ಟೇ ಅಲ್ಲ – ಅವರು ನನ್ನ ಭಾವ. ಅವರ ತಂಗಿ, ನನ್ನ ಜೀವನಸಂಗಾತಿ ಚೈತ್ರದೇವಿಯೊಂದಿಗೆ ನಾವು ಮೂವರು ಹಂಚಿಕೊಂಡ ಆ ನೆನಪುಗಳು, ಆ ಮಮತೆ, ಆ ನಗು-ಕಣ್ಣೀರುಗಳು ಇಂದು ಅವರಿಬ್ಬರೂ ನಮ್ಮೊಳಗಿಲ್ಲ ಎಂಬ ನೋವಿಗೆ ಪ್ರತಿಕ್ಷಣ ಕಾಡುತ್ತಿವೆ. _ಕಲೆಗೆ ಬದುಕು ಕೊಟ್ಟ ರವಿ_ ಕಲೆಯೆಂದರೆ ರವಿಪ್ರಸಾದ್‌ರಿಗೆ ಉಸಿರು. ಸಂಗೊಳ್ಳಿ ರಾಯಣ್ಣನ “ರಾಯಣ್ಣ” ಪಾತ್ರದಿಂದ ಆರಂಭವಾದ ಅವರ ಕಲಾಜೀವನ, ಸುಲ್ತಾನ್ ಟಿಪ್ಪು, ಓಥೆಲೊ ಮುಂತಾದ ನಾಟಕಗಳ ಮೂಲಕ ಚಿರಕೀರ್ತಿ ಪಡೆದಿತು.ನಂತರ ಟಿ.ಎಸ್. ನಾಗಾಭರಣ, ಟಿ.ಎನ್‌. ಸೀತಾರಾಂ ಅವರ ಧಾರಾವಾಹಿಗಳಲ್ಲಿ ಅವರು ನಟಿಸಿದ ಪ್ರಮುಖ ಪಾತ್ರಗಳು ಜನಮನಸ್ಸಿಗೆ ಅಚ್ಚಳಿಯದ ಗುರುತು ಬರೆದವು.ಮಗಳು ಜಾನಕಿಯ “ಚಂದು ಬಾರ್ಗಿ” ಪಾತ್ರದಲ್ಲಿ ಅವರು ತೋರಿದ ಜೀವಂತ ಅಭಿನಯ, ಇಂದಿಗೂ ಜಗತ್ತಿನಾದ್ಯಂತ ಅಭಿಮಾನಿಗಳ ನೆನಪುಗಳಲ್ಲಿ ಉಳಿದಿದೆ.ಆದರೆ, ಕಲೆಯ ಹಾದಿಯಲ್ಲಿ ಅವರು ಆರೋಗ್ಯವನ್ನು ಕಡೆಗಣಿಸಿದರು. ಕೊನೆಗೆ ಕಾಮಾಲೆ ಎಂಬ ಕಾಯಿಲೆಗೆ ಬಲಿಯಾಗಿ ಅಕಾಲಿಕವಾಗಿ ನಮ್ಮನ್ನು ಅಗಲಿದರು. ಅವರ ಅಗಲಿಕೆ ಕೇವಲ ಕಲಾರಂಗಕ್ಕೆ ನಷ್ಟವಲ್ಲ – ನನಗೆ ವೈಯಕ್ತಿಕವಾಗಿ ತುಂಬಲಾರದ ಖಾಲಿತನ. _ನೆನಪನ್ನು ಶಾಶ್ವತಗೊಳಿಸುವ ಪ್ರಯತ್ನ_ ರವಿ ಅವರ ಹೆಸರನ್ನು ಜೀವಂತವಾಗಿರಿಸಲು, ಅವರ ಕುಟುಂಬವು ಪ್ರತಿವರ್ಷ ಒಬ್ಬ ಹವ್ಯಾಸಿ ಕಲಾವಿದ ಅಥವಾ ಕಲಾವಿದೆಯನ್ನು ರಾಜ್ಯಮಟ್ಟದ ರಂಗಪ್ರಶಸ್ತಿ ನೀಡಿ ಗೌರವಿಸುವ ಮಹೋದ್ದೇಶ ಕೈಗೊಂಡಿದೆ. ಇದು ಅವರ ಕಲಾತ್ಮಕ ತ್ಯಾಗಕ್ಕೆ ನಿಜವಾದ ನಮನ.ಅವರ ನೆನಪು, ಅವರ ಸಾನ್ನಿಧ್ಯ, ಅವರ ಮಾತು-ನಗು ನನ್ನ ಜೀವನದಿಂದ ದೂರವಾಗಲಿಲ್ಲ. ಅವರ ತಂಗಿ ಚೈತ್ರಾದೇವಿಯ ಅಗಲಿಕೆಯೂ ನನ್ನ ಹೃದಯದಲ್ಲಿ ಅಳಿಯದ ಗಾಯ ಬಿಟ್ಟಿದೆ.

ಈ ಇಬ್ಬರ ನೆನಪೇ ನನಗೆ ಬರಹದ ಪ್ರೇರಣೆ. _ನನ್ನ ಕೃತಜ್ಞತೆ – ಬರಹದ ರೂಪದಲ್ಲಿ_ ಅವರಿಬ್ಬರ ನೆನಪುಗಳನ್ನು ಹೃದಯದಲ್ಲಿ ಹೊತ್ತು, ನಾನು ಬರಹದಲ್ಲಿ ಅಭಿವ್ಯಕ್ತಗೊಳಿಸುತ್ತಿರುವೆ. ಆ ನೆನಪಿನ ತೇವದಲ್ಲಿ ಮೂಡಿದ ನನ್ನ ಏಳನೇ ಕೃತಿ “*ವಿಶ್ವಾಸದ ವಿಮರ್ಶೆಗಳು* “ಇದೇ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗುತ್ತಿದೆ.ಇದು ಕೇವಲ ಕೃತಿ ಲೋಕಾರ್ಪಣೆ ಅಲ್ಲ – ನನ್ನ ಪ್ರೀತಿಪಾತ್ರ ಸ್ನೇಹಿತನಿಗೂ, ನನ್ನ ಹೃದಯದ ಸಂಗಾತಿಗೂ ಸಲ್ಲಿಸುವ ಕೃತಜ್ಞತೆಯ ನಮನ. _ಮನದಾಳದ ಸಂದೇಶ_ ಈ ಪುಣ್ಯಸ್ಮರಣೆ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಸ್ನೇಹದ ನಿಷ್ಠೆ, ಪ್ರೀತಿಯ ನೆನಪು, ಕಲೆಯ ಶ್ರದ್ಧೆ, ಬದುಕಿನ ಸತ್ಯಗಳ ಸಮಾಗಮ.ರವಿಪ್ರಸಾದ್ ಅವರ ಕಲಾತ್ಮಕ ಹಾದಿ ಮುಂದಿನ ಪೀಳಿಗೆಯ ಕಲಾವಿದರಿಗೆ ಪ್ರೇರಣೆಯಾಗಲಿ,ನನ್ನ ಬರಹದ ಈ ನಮನ ಅವರ ನೆನಪನ್ನು ಸದಾಕಾಲ ಜೀವಂತವಾಗಿರಿಸಲಿ ಎಂಬುದು ನನ್ನ ಹಾರೈಕೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *