ಸಕಲೇಶಪುರ : ರಕ್ಷಿದಿ ಎಂಬ ಗ್ರಾಮ ಎಲ್ಲರಿಗೂ ಮಿನಿ ಭಾರತ. ಇಲ್ಲಿ ಸರ್ವ ಜನಾಂಗದವರು ಒಟ್ಟಾಗಿ ಬಾಳುತ್ತಾ ಬದುಕುತ್ತಾರೆ. ಇದು ನಮ್ಮ ತಲೆಮಾರುಗಳಿಂದ ಬಂದಿರುವ ಬಳುವಳಿ, ಪರಂಪರೆ ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ಹೇಳಿದರು.

ತಾಲೂಕಿನ ರಕ್ಷಿದಿಯಲ್ಲಿ ನಡೆದ ಪ್ರವಾದಿ ಜನ್ಮದಿನಾಚರಣೆಯ ಅಂಗವಾಗಿ ನಡೆದ ಸೌಹಾರ್ದತಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ಷಿದಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮದವರೂ ಒಟ್ಟಾಗಿ ಬದುಕುತ್ತಿದ್ದಾರೆ. ರಕ್ಷಿದಿ ಎಂಬ ಊರಿನ ಹೆಸರೇ ನಮ್ಮ ಸೌಹಾರ್ದದ ನಿದರ್ಶನ. ನಾನು ಪ್ರಸಾದ್ ರಕ್ಷಿದಿ, ನನ್ನ ಪಕ್ಕದಲ್ಲಿ ಕುಳಿತಿರುವ ಹಮೀದ್ ರಕ್ಷಿದಿ ಮತ್ತು ಲೋಬೊ ರಕ್ಷಿದಿ ಎಂದಾಗಿಯೇ ಈ ರಕ್ಷಿದಿ ನಮ್ಮೆಲ್ಲರನ್ನು ಭಾರತೀಯರನ್ನಾಗಿಸಿದೆ.

ಅನೇಕ ಸಲ ನಾವು ಇದೇ ಜಾಗದಲ್ಲಿ ಕೂತು ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದೇವೆ, ಹರಟೆ ಹೊಡೆದಿದ್ದೇವೆ. ಇಂದಿಗೂ ಸ್ವಾತಂತ್ರ್ಯ ದಿನಾಚರಣೆ ಅಥವಾ ಬೇರೆ ಹಬ್ಬಗಳಾಗಲಿ ನಾವು ಒಟ್ಟಾಗಿ ಸೇರಿ ಆಚರಿಸುತ್ತೇವೆ. ಇದು ಭಾರತಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ವಾಟ್ಸಪ್, ಫೇಸ್‌ಬುಕ್‌ನಲ್ಲಿ ಬರುವ ಮಾಹಿತಿಯನ್ನು ಪರಿಶೀಲಿಸದೇ ನಂಬಿದರೆ ಸಮಾಜದಲ್ಲಿ ಜಗಳಗಳು ಹುಟ್ಟುತ್ತವೆ. ಆದರೆ ಗ್ರಂಥಗಳ ಓದಿನಲ್ಲಿ ಸದಾ ಜ್ಞಾನ ಮತ್ತು ವಿವೇಕ ದೊರೆಯುತ್ತದೆ. ಪವಿತ್ರ ಕುರಾನ್, ಬೈಬಲ್, ಪುರಾಣ, ರಾಮಾಯಣ, ಮಹಾಭಾರತ – ಎಲ್ಲವನ್ನೂ ಓದಬೇಕು. ಓದುವುದರಿಂದ ಜ್ಞಾನ ಸಂಪಾದನೆ ಹೆಚ್ಚುವುದರಿಂದ ಜಗಳಗಳಿಗೆ ಕಾರಣವೇ ಇರುವುದಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಪತ್ರಕರ್ತ ಅರುಣ್ ರಕ್ಷಿದಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಅಮಲು ಪದಾರ್ಥಗಳ ಬಲೆಗೆ ಬೀಳುತ್ತಿರುವುದು ಆತಂಕಕಾರಿ. ಅಮಲು ಕ್ಷಣಿಕ ಆನಂದ ನೀಡಿದರೂ, ಅದು ದೇಹ, ಮನಸ್ಸು, ಕುಟುಂಬ, ಸಮಾಜ ಎಲ್ಲವನ್ನೂ ಹಾಳುಮಾಡುತ್ತದೆ. ಶಿಕ್ಷಣ, ಉದ್ಯೋಗ, ಭವಿಷ್ಯ ಕಸಿದುಕೊಳ್ಳುತ್ತದೆ. ದೇಶದ ಆಸ್ತಿಯಾದ ಯುವಕರು ಇಂತಹ ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಬೇಕು. ಪೋಷಕರು, ಶಿಕ್ಷಕರು ಹಾಗೂ ಸಮಾಜ ಒಟ್ಟಾಗಿ ಜಾಗೃತಿ ಮೂಡಿಸಿದಾಗ ಮಾತ್ರ ಈ ದುರಂತವನ್ನು ತಡೆಯಲು ಸಾಧ್ಯ ಎಂದರು.ಶರೀಫ್ ಮಿಸ್ಬಾಯ್ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಯಾದ್ಗಾರ್ ಜಾಕೀರ್, ಹಮೀದ್ ರಕ್ಷಿದಿ, ಅಬ್ಬಾಸ್ ಮುಸ್ಲಿಯಾರ್, ರಫೀಕ್ ಮದನಿ, ಶಶಿ, ಇಸ್ಮಾಯಿಲ್ ಮುಸ್ಲಿಯಾರ್, ಹಸೈನಾರ್ ಅಚ್ಚು, ಶಶಿಧರ್ ಭಟ್, ರವಿ ಗೌಡ, ಪ್ರಸನ್ನ ಗೌಡ, ಶ್ರೀಧರ್, ರಝಕ್, ಅಬ್ದುಲ್ ಖಾದರ್ ಹಾಗೂ ಆನೆ ಮಹಲ್ ಹಸೈನಾರ್ ಅನೇಕ ಗಣ್ಯರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *