ಹಾಸನ: ನಗರದ ಶಾಂತಿನಗರದ ನಿವಾಸಿ ಕೆ. ಚಂದ್ರಶೇಖರ್ ಅವರ ಮೊಮ್ಮಗ ಸೂಪರ್ಣ ಎಸ್. ಕೌಶಿಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿ ಕುಟುಂಬಕ್ಕೆ ಮಾತ್ರವಲ್ಲ, ಸಂಪೂರ್ಣ ಹಾಸನಕ್ಕೆ ಹೆಮ್ಮೆ ತಂದಿದ್ದಾನೆ. ಕೇವಲ ೫ ವರ್ಷ ೫ ತಿಂಗಳು ವಯಸ್ಸಿನಲ್ಲಿಯೇ ಸೂಪರ್ಣನು ಅಂತರಾಷ್ಟ್ರೀಯ ದಾಖಲೆಗಳ ಪುಸ್ತಕ ದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.

ಸೂಪರ್ಣ ಎಸ್. ಕೌಶಿಕ್ ಅವರು ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸಿಸುತ್ತಿರುವ ಶ್ರೀಹರಿ ಎಚ್.ಸಿ. (ಚಂದ್ರಶೇಖರ್ ಅವರ ಹಿರಿಯ ಪುತ್ರ) ಹಾಗೂ ರಂಜಿನಿ ಬಿ.ಆರ್. ದಂಪತಿಗಳ ಮಗನಾಗಿದ್ದಾನೆ.

ಪ್ರಸ್ತುತ ಅವನು ಪದ್ಮನಾಭನಗರದಲ್ಲಿರುವ ಕಾರ್ಮೆಲ್ ಶಾಲೆಯ ಕಿರಿಯ ವಿದ್ಯಾರ್ಥಿ. ಅವನ ವಿಶಿಷ್ಟ ಸಾಧನೆ ಎಂದರೆ ? “ಸಂಸ್ಕೃತ ಭಾಷೆಯಲ್ಲಿ ಅತಿ ಹೆಚ್ಚು ಜೀವಿಗಳ ಹೆಸರುಗಳನ್ನು ಪಠಿಸಲು ಹಾಗೂ ಗುರುತಿಸಲು ಸಾಧ್ಯವಾದ ಅತಿ ಕಿರಿಯ ಪ್ರತಿಭಾವಂತ” ಎಂಬ ಶ್ರೇಣಿಯಲ್ಲಿ ವಿಶ್ವ ದಾಖಲೆ ಸ್ಥಾಪಿಸಿದ್ದು. ಈ ಸಾಧನೆಗಾಗಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಸೂಪರ್ಣಗೆ ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪ್ರದಾನ ಮಾಡಿದೆ.

ಕೆ. ಚಂದ್ರಶೇಖರ್ ಅವರು ಮೊಮ್ಮಗನ ಸಾಧನೆಗೆ ಹೃದಯಪೂರ್ವಕ ಸಂತೋಷ ವ್ಯಕ್ತಪಡಿಸಿ, “ಸೂಪರ್ಣನು ಅತಿ ಕಿರಿಯ ವಯಸ್ಸಿನಲ್ಲಿ ಸಂಸ್ಕೃತ ಭಾಷೆಯ ಪಾಠದ ಮೂಲಕ ವಿಶ್ವದಾಖಲೆ ಬರೆದಿರುವುದು ನಮ್ಮ ಕುಟುಂಬಕ್ಕೆ ಮಹಾ ಗೌರವದ ಸಂಗತಿ. ಅವನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಹಾಸನದ ಮೂಲದಿಂದ ಬಂದಿರುವ ಈ ಬಾಲ ಪ್ರತಿಭೆಯ ಸಾಧನೆ ಶಿಕ್ಷಣ ಕ್ಷೇತ್ರಕ್ಕೂ ಮಾದರಿಯಾಗಿದ್ದು, ಇತರ ಮಕ್ಕಳಿಗೂ ಪ್ರೇರಣೆಯಾಗುವಂತದ್ದು. ಸಂಸ್ಕೃತ ಭಾಷೆಯ ಪಾರಂಪರ್ಯವನ್ನು ಕಾಪಾಡಿ ಬೆಳೆಸುವತ್ತ ಇಂತಹ ಪುಟ್ಟ ವಯಸ್ಸಿನ ಮಕ್ಕಳಿಂದ ಬರುತ್ತಿರುವ ಪ್ರಯತ್ನಗಳು ಸಮಾಜಕ್ಕೆ ಹೊಸ ಉತ್ಸಾಹವನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *