
ಸಕಲೇಶಪುರ : ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹೊಸ ಸೇತುವೆ ನಿರ್ಮಾಣ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಪುನರ್‌ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಶಾಸಕ ಸಿಮೆಂಟ್ ಮಂಜು ಸರ್ಕಾರವನ್ನು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಹಾನುಬಾಳು ಹೋಬಳಿ ಹಾದಿಗೆಯಿಂದ ಬೇಲೂರು ತಾಲ್ಲೂಕಿನ ಅರೇಹಳ್ಳಿಗೆ ಸಂಪರ್ಕ ಕಲ್ಪಿಸಲು ಹೇಮಾವತಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ₹25 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ಕೇಂದ್ರಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಹೇಮಾವತಿ ನದಿಗೆ ಸೇತುವೆ ಇಲ್ಲದಿರುವುದರಿಂದ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರು ಹಾನುಬಾಳುವಿನಿಂದ ಸಕಲೇಶಪುರ ಮಾರ್ಗವಾಗಿ ಸುಮಾರು 42 ಕಿ.ಮೀ ಸುತ್ತಾಡಿ ತೆರಳಬೇಕಾಗಿದೆ. ಹಾನುಬಾಳು ಮತ್ತು ಅರೇಹಳ್ಳಿ ನಡುವೆ ವ್ಯಾಪಾರ-ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಎರಡು ಹೋಬಳಿ ಕೇಂದ್ರಗಳನ್ನು ನೇರವಾಗಿ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆ ನಿರ್ಮಾಣದ ಅಗತ್ಯವನ್ನು ಸ್ಥಳೀಯರು ಹಲವು ಬಾರಿ ಸರ್ಕಾರದ ಹಾಗೂ ತಮ್ಮ ಗಮನಕ್ಕೆ ತಂದಿದ್ದರು ಎಂದು ಹೇಳಿದರು.
ಪ್ರಸ್ತಾವಿತ ಸೇತುವೆ ನಿರ್ಮಾಣವಾದಲ್ಲಿ ಕೇವಲ 10 ಕಿ.ಮೀ ದೂರವನ್ನು ಸುಮಾರು 20 ನಿಮಿಷಗಳಲ್ಲಿ ಕ್ರಮಿಸಬಹುದಾಗಿ, ಪ್ರಯಾಣದ ಅವಧಿ ಕಡಿಮೆಯಾಗುವುದರೊಂದಿಗೆ ವ್ಯಾಪಾರ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶಗಳನ್ನು ಒಳಗೊಂಡಿರುವ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮಳೆಗಾಲದ ವೇಳೆ ಗುಡ್ಡಗಾಡು ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಗಳ ನೀರಿನ ಹರಿವಿನಿಂದ ಸಂಪರ್ಕ ಕಡಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತಾಲ್ಲೂಕು ಕೇಂದ್ರ ತಲುಪಲು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಳೆಗಾಲ ಪ್ರಾರಂಭವಾಗುವ ಮುನ್ನ ಕೆಳಕಂಡ ಸೇತುವೆ ಕಾಮಗಾರಿಗಳಿಗೆ ತಲಾ ₹5 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ವನಗೂರು ಗ್ರಾ.ಪಂ. ವ್ಯಾಪ್ತಿಯ ಪಟ್ಲದಿಂದ ಕಳ್ಳಿಗದ್ದೆ–ಬಾಣಗೇರಿ ಸಂಪರ್ಕ ಸೇತುವೆಮಳಲಿ ಗ್ರಾ.ಪಂ. ಮಠಸಾಗರದಿಂದ ಕೃಷ್ಣಾಪುರ ಸಂಪರ್ಕಿಸುವ ಕೀರುಹಳ್ಳ ಸೇತುವೆಆಲೂರು ತಾಲ್ಲೂಕಿನ ಅಬ್ಬನ ಗ್ರಾ.ಪಂ. ಆನೆಗಳಲೆ ಗ್ರಾಮ ಸೇತುವೆಐಗೂರು ಗ್ರಾ.ಪಂ. ದೊಡ್ಡಕಲ್ಲೂರು–ಕುಂಭಾರಗೇರಿ ಸಂಪರ್ಕಿಸುವ ಐಗೂರು ಹೊಳೆ ಸೇತುವೆಕ್ಯಾಮನಹಳ್ಳಿ ಗ್ರಾ.ಪಂ. ಮಾವಿನಹಳ್ಳಿ–ಮದನಾಪುರ ಸಂಪರ್ಕಿಸುವ ಕಿರುಹಳ್ಳ ಸೇತುವೆಈ ಎಲ್ಲ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಶಾಸಕ ಸಿಮೆಂಟ್ ಮಂಜು ತಿಳಿಸಿದ್ದಾರೆ.
