ಸಕಲೇಶಪುರ, ಫೆ.27 : ಕಾಳು ಮೆಣಸು ವಾಣಿಜ್ಯ ಬೆಳೆಯಾಗಿದ್ದು ಉಪಬೆಳೆಯಾಗಿ ಬೆಳೆದರೂ ಲಾಭದಾಯಕವಾಗಿದೆ. ಉತ್ತಮ ಗುಣಮಟ್ಟದ ಕಾಳು ಮೆಣಸಿಗೆ ದೇಶೀಯ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ, ರೈತರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ಹೆಚ್ಚು ಆದಾಯ ಗಳಿಸಬಹುದು ಎಂದು ಭಾರತೀಯ ಸಂಬಾರ ಮಂಡಳಿ ಸಕಲೇಶಪುರ ಉಪನಿರ್ದೇಶಕರಾದ ಸುಂದರೇಶನ್ ಎನ್. ತಿಳಿಸಿದರು.

ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಕಚೇರಿಯಲ್ಲಿ “ಕಾಳು ಮೆಣಸು ಉತ್ಪಾದನೆಯಲ್ಲಿ ಗುಣಮಟ್ಟ ಸುಧಾರಣೆ” ಕುರಿತ ಮಹತ್ವದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಳು ಮೆಣಸಿನ ಕೊಯ್ಲೋತ್ತರ ನಿರ್ವಹಣೆ, ಸರಿಯಾದ ಒಣಗಿಸುವ ತಂತ್ರಗಳು, ಶುದ್ಧೀಕರಣ ಮತ್ತು ಗ್ರೇಡಿಂಗ್ ಪ್ರಕ್ರಿಯೆಗಳು, ಸಂಗ್ರಹಣಾ ವಿಧಾನಗಳು ಸೇರಿದಂತೆ ಗುಣಮಟ್ಟ ಕಾಪಾಡುವ ವೈಜ್ಞಾನಿಕ ಕ್ರಮಗಳ ಬಗ್ಗೆ ರೈತರು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಉತ್ತಮ ಗುಣಮಟ್ಟದ ಉತ್ಪನ್ನವನ್ನು ಮಾರುಕಟ್ಟೆಗೆ ಒದಗಿಸಿದರೆ ಉತ್ತಮ ಬೆಲೆ ದೊರಕುವ ಸಾಧ್ಯತೆ ಹೆಚ್ಚುತ್ತದೆ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ಕಾಳು ಮೆಣಸು ಬೆಳೆಯುವ ಜಿಲ್ಲೆಗಳ ರೈತರಿಗೆ ಸಮರ್ಪಕ ತರಬೇತಿ, ಸಂಸ್ಕರಣಾ ವಿಧಾನಗಳು ಹಾಗೂ ಉತ್ತಮ ತಳಿ ಆಯ್ಕೆ ಕುರಿತು ಮಂಡಳಿಯಿಂದ ಮಾಹಿತಿ ನೀಡಲಾಗುತ್ತಿದೆ. ಗುಣಮಟ್ಟದ ಮಾನದಂಡಗಳನ್ನು ಪಾಲಿಸುವ ಮಹತ್ವ, ರಫ್ತು ಅವಕಾಶಗಳು, ಮಾರುಕಟ್ಟೆ ಧೋರಣೆಗಳು ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.

ಬೆಲೆಯಲ್ಲಿ ಆಗುವ ಏರುಪೇರು ಹಾಗೂ ನೇರ ಮಾರುಕಟ್ಟೆ ಸಂಪರ್ಕದ ಮೂಲಕ ಲಾಭ ಹೆಚ್ಚಿಸುವ ಮಾರ್ಗಗಳನ್ನೂ ವಿವರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕ್ಷೇತ್ರಾಧಿಕಾರಿ ಏಸ್.ಕುಮಾರ್ ಮಾತನಾಡಿ, ಕಾಳು ಮೆಣಸಿನ ಉತ್ತಮ ಉತ್ಪಾದನೆಗೆ ಸರಿಯಾದ ತಳಿ ಆಯ್ಕೆ ಅತ್ಯಂತ ಮುಖ್ಯವೆಂದರು. ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ಹೆಚ್ಚು ಇಳುವರಿ ಹಾಗೂ ರೋಗನಿರೋಧಕ ಶಕ್ತಿಯುಳ್ಳ ತಳಿಗಳನ್ನು ಆಯ್ಕೆ ಮಾಡಿದಲ್ಲಿ ಉತ್ತಮ ಫಲಿತಾಂಶ ದೊರಕುತ್ತದೆ ಎಂದು ಹೇಳಿದರು. ಜೈವಿಕ ಗೊಬ್ಬರಗಳ ಬಳಕೆ ಮಣ್ಣಿನ ಆರೋಗ್ಯ ಕಾಪಾಡುವುದಲ್ಲದೆ ದೀರ್ಘಕಾಲಿಕವಾಗಿ ಉತ್ತಮ ಇಳುವರಿಗೆ ಸಹಕಾರಿಯಾಗುತ್ತದೆ ಎಂದರು.

ರೋಗ ಮತ್ತು ಕೀಟ ನಿಯಂತ್ರಣ ಕುರಿತು ಮಾತನಾಡಿದ ಅವರು, ಮುಂಚಿತ ತಡೆ ಕ್ರಮಗಳನ್ನು ಅನುಸರಿಸಿ ಸಾಂಬಾರ ಮಂಡಳಿಯ ಸಲಹೆಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

ಸರಿಯಾದ ಸಮಯದಲ್ಲಿ ಕೊಯ್ಲು, ಶುದ್ಧ ಒಣಗಿಸುವಿಕೆ ಮತ್ತು ಶೇಖರಣಾ ಕ್ರಮಗಳನ್ನು ಅನುಸರಿಸಿದರೆ ಮಾರುಕಟ್ಟೆಯಲ್ಲಿ ಉತ್ತಮ ದರ ಪಡೆಯಲು ಸಾಧ್ಯವಿದೆ ಎಂದು ವಿವರಿಸಿದರು.

ನಂತರ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷ ವಿ.ಪಿ. ವಿಶ್ವನಾಥ್ ಮಾತನಾಡಿ, ಇಂತಹ ಜ್ಞಾನವರ್ಧಕ ಕಾರ್ಯಕ್ರಮಗಳು ರೈತರ ಆದಾಯ ವೃದ್ಧಿಗೆ ಹಾಗೂ ಗುಣಮಟ್ಟಾಧಾರಿತ ಕೃಷಿ ಪದ್ಧತಿಗಳ ಅಳವಡಿಕೆಗೆ ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಾಗಾರವು ಕಾಳು ಮೆಣಸು ಬೆಳೆಗಾರರಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡುವ ಮೂಲಕ ಗುಣಮಟ್ಟಾಧಾರಿತ ಉತ್ಪಾದನೆಗೆ ಪ್ರೇರಣೆ ನೀಡಿದ ಮಹತ್ವದ ಕಾರ್ಯಕ್ರಮವಾಯಿತು.

ಕಾರ್ಯಕ್ರಮದಲ್ಲಿ ಹೆಚ್ ಡಿ ಪಿ ಎ ಮಾಜಿ ಸಂಘಟನಾ ಕಾರ್ಯದರ್ಶಿ ಕೆ. ಪಿ ಕೃಷ್ಣೆಗೌಡ,ಸಂಘದ ಖಜಾಂಚಿ ಹೂವಣ್ಣ ಗೌಡ, ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ, ಜಂಟಿ ಕಾರ್ಯದರ್ಶಿ ವಿಜಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅನಿಲ್ ಜಾತಹಳ್ಳಿ, ಗಿರೀಶ್ ಚಿನ್ನಹಳ್ಳಿ, ಇಷ್ಟಾರ್ಥ, ಸಕಲೇಶಪುರ ಸಾಂಬಾರ ಮಂಡಳಿ ಕು. ಭಾರತಿ ಎ ಬಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬೆಳೆಗಾರರು ಹಾಗೂ ಯುವ ರೈತರು ಭಾಗವಹಿಸಿ ತಮ್ಮ ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *