ಹಾಸನ : ಮಾ.೧೭: ಭಾರತ ಸರ್ಕಾರದ ೨೦೨೬-೨೭ನೇ ಸಾಲಿನ ಮಹತ್ವಾಕಾಂಕ್ಷಿ ಜನಗಣತಿ ಕಾರ್ಯ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ೧ರಿಂದ ಆರಂಭಗೊಳ್ಳಲಿದ್ದು, ನಗರದೆಲ್ಲೆಡೆ ವ್ಯವಸ್ಥಿತ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಬಾರಿ ಜನಗಣತಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲೇ ಸಾರ್ವಜನಿಕರಿಗೆ ಸ್ವಯಂ ಆನ್‌ಲೈನ್ ಮೂಲಕ ತಮ್ಮ ಮಾಹಿತಿ ದಾಖಲಿಸುವ ಸೌಲಭ್ಯ ಒದಗಿಸಲಾಗಿದೆ. ಇನ್ನು ಆಸ್ತಿ ತೆರಿಗೆ ಏಪ್ರಿಲ್‌ನಲ್ಲಿ ಪಾವತಿಸಿದ್ರೆ ೫% ರಿಯಾಯಿತಿ ಸಿಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು.

ಮಾಧ್ಯಮಕ್ಕೆ ತಮ್ಮ ಕಛೇರಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದಲ್ಲಿ ನಾಗರಿಕರು ತಮ್ಮ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಮೂಲಕ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಲೊಕೇಶನ್ ನಮೂದಿಸಿ ಸರಳ ವಿಧಾನದಲ್ಲಿ ಜನಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಒಟ್ಟು ೩೪ ಪ್ರಶ್ನೆಗಳಿರುವ ಈ ಫಾರ್ಮ್‌ನಲ್ಲಿ ಕುಟುಂಬದ ಸದಸ್ಯರು, ಶಿಕ್ಷಣ, ಉದ್ಯೋಗ, ವಾಸಸ್ಥಳ ಸೇರಿದಂತೆ ವಿವಿಧ ಮೂಲಭೂತ ಮಾಹಿತಿಯನ್ನು ಕೇಳಲಾಗುತ್ತದೆ. ಏಪ್ರಿಲ್ ೧ರಿಂದ ಏಪ್ರಿಲ್ ೧೫ರವರೆಗೆ ಈ ಸ್ವಯಂ ನೋಂದಣಿ ವ್ಯವಸ್ಥೆ ಲಭ್ಯವಿದ್ದು, ಜನರು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಎರಡನೇ ಹಂತವಾಗಿ ಏಪ್ರಿಲ್ ೧೫ರಿಂದ ಮೇ ೧೫ರವರೆಗೆ ಗಣತಿದಾರರು ಮನೆಮನೆಗೆ ಭೇಟಿ ನೀಡಿ, ಸ್ವಯಂ ನೋಂದಣಿ ಮಾಡದ ಮನೆಗಳ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ಈಗಾಗಲೇ ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಈ ಕಾರ್ಯಕ್ಕಾಗಿ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಸುಮಾರು ೩೩೯ ಬ್ಲಾಕ್‌ಗಳಾಗಿ ವಿಭಜಿಸಲಾಗಿದ್ದು, ಪ್ರತಿಯೊಂದು ಬ್ಲಾಕ್‌ಗೆ ಸರಾಸರಿ ೧೫೦ರಿಂದ ೨೨೦ ಮನೆಗಳು ಒಳಪಡುವಂತೆ ಯೋಜನೆ ರೂಪಿಸಲಾಗಿದೆ.

ಪ್ರತಿ ಬ್ಲಾಕ್‌ಗೆ ನಿಯೋಜಿತ ಗಣತಿದಾರರು ಮನೆಮನೆಗೆ ತೆರಳಿ ಕುಟುಂಬ ಸದಸ್ಯರ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಿ, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದಾಖಲಾತಿಯನ್ನು ಒದಗಿಸಲಿದ್ದಾರೆ. ಈ ಮಹತ್ವದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಸುಮಾರು ೪೦೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರಿಗೆ ಪೂರ್ವಭಾವಿಯಾಗಿ ತರಬೇತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜನಗಣತಿ ಮಾಹಿತಿಯು ಸಂಪೂರ್ಣ ಗೌಪ್ಯವಾಗಿದ್ದು, ಸಂಗ್ರಹಿಸಲಾದ ಮಾಹಿತಿಯನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ, ಕೇಳಲಾಗುವ ಪ್ರಶ್ನೆಗಳಿಗೆ ನಿಖರ ಹಾಗೂ ಸತ್ಯ ಮಾಹಿತಿಯನ್ನು ನೀಡುವಂತೆ ಮನವಿ ಮಾಡಲಾಗಿದೆ.

ದೇಶದ ಅಭಿವೃದ್ಧಿ ಯೋಜನೆಗಳ ರೂಪುರೇಷೆ ತಯಾರಿಕೆಯಲ್ಲಿ ಜನಗಣತಿ ಮಾಹಿತಿಯು ಅತ್ಯಂತ ಮಹತ್ವದ್ದಾಗಿರುವುದರಿಂದ, ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಾಸನ ಮಹಾನಗರ ಪಾಲಿಕೆ ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಪಾಲಿಕೆಯ ಪ್ರಕಟಣೆ ಪ್ರಕಾರ, ಏಪ್ರಿಲ್ ೧ರಿಂದ ೩೦ರವರೆಗೆ ಆಸ್ತಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ಶೇ.೫ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದರಿಂದ ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸಲು ಪ್ರೋತ್ಸಾಹ ದೊರೆಯಲಿದೆ.

ಮೇ ೧ರಿಂದ ಜೂನ್ ೩೦ರವರೆಗೆ ತೆರಿಗೆ ಪಾವತಿಸಿದರೂ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಆದರೆ ಜುಲೈ ೨೦೨೬ರಿಂದ ನಂತರ ತೆರಿಗೆ ಪಾವತಿಸಿದಲ್ಲಿ ಪ್ರತಿ ತಿಂಗಳಿಗೆ ಶೇ.೨ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ದಂಡವನ್ನು ತಪ್ಪಿಸಲು ಮುಂಚಿತವಾಗಿ ತೆರಿಗೆ ಪಾವತಿಸುವಂತೆ ಪಾಲಿಕೆ ಮನವಿ ಮಾಡಿದೆ.

ಆಸ್ತಿ ತೆರಿಗೆ ಜೊತೆಗೆ ಟ್ರೇಡ್ ಲೈಸೆನ್ಸ್ ಶುಲ್ಕ ಹಾಗೂ ಮಳಿಗೆ ಬಾಡಿಗೆಯನ್ನೂ ಸಕಾಲದಲ್ಲಿ ಪಾವತಿಸುವಂತೆ ನಾಗರಿಕರಲ್ಲಿ ಕೋರಲಾಗಿದೆ. ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆ ಹಣವೇ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ನಗರ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ನಗರವನ್ನು ಇನ್ನಷ್ಟು ಸ್ವಚ್ಛ, ಸುಂದರ ಹಾಗೂ ಅಭಿವೃದ್ಧಿಪರ ನಗರವನ್ನಾಗಿ ರೂಪಿಸಲು ನಾಗರಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಜನಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ ರಿಯಾಯಿತಿಯ ಸದುಪಯೋಗ ಪಡೆಯುವಂತೆ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *