ಸಕಲೇಶಪುರ : ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವದ ಭಿತ್ತಿಯನ್ನು ಬಲಪಡಿಸಿ, ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತಹ ಮಹತ್ವದ ಸಾಧನೆ ಮಾಡಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಬುಧವಾರ ತಾಲೂಕಿನ ಬೆಳಗೋಡು ಹೋಬಳಿ ವೀರಶೈವ ಲಿಂಗಾಯತ ಯುವ ಸೇನೆ ಘಟಕದ ವತಿಯಿಂದ ಬಾಗೆ ಗ್ರಾಮದಲ್ಲಿ ಆಯೋಜಿಸಿದ್ದ ಶಿವಕುಮಾರ ಮಹಾಸ್ವಾಮಿಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿವಕುಮಾರ ಸ್ವಾಮೀಜಿಗಳು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿದ್ದರು. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ನೀಡಿದ ಅವರು, ಅನ್ನ, ವಸತಿ ಹಾಗೂ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದರು ಎಂದು ಹೇಳಿದರು.

ಶ್ರೀಗಳು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಆದರ್ಶಗಳು ಮತ್ತು ಚಿಂತನೆಗಳು ಸದಾ ಜೀವಂತವಾಗಿವೆ. ‘ಗಗನಕ್ಕೆ ಗಗನವೇ ಸಾಟಿ, ಸಾಗರಕ್ಕೆ ಸಾಗರವೇ ಉಪಮೆ’ ಎಂಬಂತೆ ಸೇವಾ ಕ್ಷೇತ್ರದಲ್ಲಿ ಶಿವಕುಮಾರ ಸ್ವಾಮೀಜಿಯವರಿಗೆ ಸಮಾನರಿಲ್ಲ ಎಂದು ಅಭಿಪ್ರಾಯಪಟ್ಟರು.

ಸಂಕಲಾಪುರ ಮಠದ ಧರ್ಮರಾಜೇಂದ್ರ ಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನಕೆರೆ, ವೀರಶೈವ ಲಿಂಗಾಯತ ಯುವ ಸೇನೆಯ ಬೆಳಗೋಡು ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರ ಹೊಸಕೊಪ್ಪಲು, ಬಿಜೆಪಿ ಮುಖಂಡರಾದ ಕೆ.ಎಲ್. ಜೈಪ್ರಕಾಶ್, ಯುವರಾಜ್, ಹರೀಶ್ ಕಾಡುಮಕ್ಕಿ, ಹರೀಶ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಕೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed