ಸಕಲೇಶಪುರ‌ : ತಾಲೂಕಿನಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ “ಡ್ರಗ್ಸ್ ಮುಕ್ತ ಸಕಲೇಶಪುರ” ಆಂದೋಲನದ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ, ಪುಸ್ತಕ ಬಿಡುಗಡೆ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವು ಭಾನುವಾರ ಸಂಜೆ ನಾಡಪ್ರಭು ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಾಜ್ಯ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ರಂಗಕರ್ಮಿ ಪ್ರಸಾದ್ ರಕ್ಷಿದ್ದಿ ,ಯುವ ಲೇಖಕಿ ಕುಮಾರಿ ಡಯಾನಾ ಡಿಸೋಜ ಅವರ ಚೊಚ್ಚಲ ಕೃತಿ “ಅಂತರಂಗದ ಗುಟ್ಟು” ಹಾಗೂ ಸಾಹಿತಿ ವಿಶ್ವಾಸ್ ಗೌಡ ಅವರ 10ನೇ ಕೃತಿ “ದೇವರನ್ನು ಹುಡುಕಬೇಕಾಗಿದೆ” ಪುಸ್ತಕಗಳನ್ನು ಬಿಡುಗಡೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹೆಚ್. ಎಂ. ವಿಶ್ವನಾಥ್ ಮಾತನಾಡಿ, ಚಳವಳಿ, ಹೋರಾಟ, ಸಾಹಿತ್ಯ ಮತ್ತು ಸಂಗೀತವು ಸಮಾಜದ ಪರಿವರ್ತನೆಗೆ ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಡ್ರಗ್ಸ್ ಎಂಬ ಮಹಾಮಾರಿ ವಿರುದ್ಧ ಹೋರಾಟ ನಡೆಸಲು ಯುವಜನತೆ, ಸಾಹಿತ್ಯಿಕರು ಹಾಗೂ ಕಲಾವಿದರು ಒಂದಾಗಿ ಜಾಗೃತಿ ಮೂಡಿಸಬೇಕಿದ್ದು, ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವುದು ಅವಶ್ಯಕ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಕೇವಲ ಮನರಂಜನೆಗಾಗಿ ಅಲ್ಲ, ಸಮಾಜದೊಳಗಿನ ಸಮಸ್ಯೆಗಳ ವಿರುದ್ಧ ಹೋರಾಡುವ ವೇದಿಕೆಗಳಾಗಿವೆ. ಕಲೆ ಮತ್ತು ಸಾಹಿತ್ಯ ಜನರನ್ನು ಒಂದಾಗಿಸಿ ಜಾಗೃತಿ ಮೂಡಿಸುವ ಶಕ್ತಿ ಹೊಂದಿದ್ದು, ಸಂಗೀತವು ಮನಸ್ಸುಗಳನ್ನು ಸಂಪರ್ಕಿಸುವ ಸೇತುವೆಯಾಗುತ್ತದೆ. ಯುವಕರು ಡ್ರಗ್ಸ್‌ನಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನದ ಸಂಚಾಲಕ ಮಲ್ನಾಡ್ ಮೆಹಬೂಬ್ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಡ್ರಗ್ಸ್ ಎಂಬುದು ಸಮಾಜದ ಮೂಲಗಳನ್ನು ಹಾಳು ಮಾಡುವ ಗಂಭೀರ ಸವಾಲು. ಯುವಜನತೆ ಇದರ ಬಲಿಯಾಗುತ್ತಿದ್ದರೆ ದೇಶದ ಭವಿಷ್ಯವೇ ಅಪಾಯದಲ್ಲಿರುತ್ತದೆ. ಕೇವಲ ಸರ್ಕಾರದ ಕ್ರಮಗಳಿಂದ ಮಾತ್ರ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಕುಟುಂಬ, ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು ಹಾಗೂ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು,” ಎಂದು ಹೇಳಿದರು.ಇದೇ ವೇಳೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮೂಲಕ ಜಾಗೃತಿ ಮೂಡಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಚೇತನ ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ನಾಗರಾಜ್ ಹೆತ್ತೂರು ಸ್ವಾಗತಿಸಿದರು.ಸಮಾರಂಭದಲ್ಲಿಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಜೈ ಮಾರುತಿ ದೇವರಾಜ್, ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ಮುಫೀಸ್ , ಸರ್ಕಾರಿ ನೌಕರರ ಸಂಘದ ಶಾಂತರಾಜ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್, ದಲಿತ ಮುಖಂಡ ನಲ್ಲುಲ್ಲಿ ಈರಪ್ಪ, ನಂಜಮ್ಮ ಮಹಿಳಾ ಸಮಾಜದ ಅಧ್ಯಕ್ಷೆ ಕೌಸಲ್ಯ ಲಕ್ಷ್ಮಣ್ ಗೌಡ, ವೀರಶೈವ ಸಮಾಜದ ಮುಖಂಡರಾದ ಶ್ರೀಮತಿ ಅರ್ಚನಾ ಜಂಯತ್, ಮಹಿಳಾ ಮಾರ್ಗದರ್ಶಿ ಅಸೋಸಿಯೇಟ್ ಅಧ್ಯಕ್ಷೆ ಕಲ್ಪನಾ ಕೀರ್ತಿ, ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಸಂಘದ ರಮೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುದೀರ್, ನಿಕಟ ಪೂರ್ವ ಅಧ್ಯಕ್ಷ ಜೈ ಭೀಮ್ ಮಂಜು, ಪತ್ರಕರ್ತ ಅಕ್ಬರ್ ಜುನೈದ್, ಕಾರ್ಮಿಕ ಮುಖಂಡೆ ಸೌಮ್ಯ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಗಗನ್, ಮಲೆನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುದೇವ್, ನಾಗರೀಕ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರವಿ ಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಆದಿ ದ್ರಾವಿಡ ಪೌರಕಾರ್ಮಿಕರ ಸಂಘದ ನಂಜಯ್ಯ, ರಾಕೇಶ್ ಮೆನಿಜೆಸ್, ಜಿಲ್ಲಾ ಅಧ್ಯಕ್ಷರಾದ ವಿರೇಶ ವಲಳಹಳ್ಳಿ (ಕರ್ನಾಟಕ ದಲಿತ ಸಂಘರ್ಷ ಸಮಿತಿ), ನಿವೃತ್ತ ಅಧಿಕಾರಿ ಅಣ್ಣೆಗೌಡರು, ಪುರಸಭೆ ಸದಸ್ಯೆ ಅನ್ನಪೂರ್ಣ ಶ್ರೀ ಶೈಲ, ಸಮಾಜಿಕ ಕಾರ್ಯಕರ್ತೆ ಸಾಯಿರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು ಜೊತೆಗೆ ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳು, ವಿವಿಧ ಕಾರ್ಮಿಕ, ಮಹಿಳಾ ಹಾಗೂ ಜನಪರ ಸಂಘಟನೆಗಳು ಹಾಗೂ “ಡ್ರಗ್ಸ್ ಮುಕ್ತ ಸಕಲೇಶಪುರ” ಸಂಘಟನೆಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದ ಭಾಗವಾಗಿ ನಡೆದ ಸಂಗೀತ ಸಂಜೆ ಪ್ರೇಕ್ಷಕರನ್ನು ರಂಜಿಸಿತು. ವಿವಿಧ ಕಲಾವಿದರು ಕನ್ನಡ ಮತ್ತು ಹಿಂದಿ ಹಾಡುಗಳನ್ನು ಹಾಡಿ ಮನರಂಜನೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *