ಸಕಲೇಶಪುರ : ಧಾರ್ಮಿಕ ಕ್ಷೇತ್ರಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷ ಸೂರ್ಯನಾರಾಯಣ್ ಹೇಳಿದರು.

ಪಟ್ಟಣದ ಗಾಯತ್ರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ, ಶಂಕರಾಚಾರ್ಯ ಹಾಗೂ ರಾಮಾನುಜಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿ ಶಂಕರಾಚಾರ್ಯರು ಭಾರತೀಯ ಸಂಸ್ಕೃತಿ, ಧರ್ಮ ಮತ್ತು ತತ್ವಜ್ಞಾನವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದ ಮಹಾನ್ ಯೋಗಿ ಹಾಗೂ ಚಿಂತಕರಾಗಿದ್ದರು. ಅಲ್ಪಾಯುಷ್ಯದಲ್ಲಿಯೇ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಸನಾತನ ಧರ್ಮದ ಸಾರವನ್ನು ಜನರಿಗೆ ತಲುಪಿಸಿದ ಅಪೂರ್ವ ಸಾಧನೆ ಅವರದ್ದು ಎಂದು ಹೇಳಿದರು.

ಧಾರ್ಮಿಕ ಮೌಲ್ಯಗಳ ಉಳಿವು, ವೇದಾಂತ ತತ್ವಗಳ ಪ್ರಸಾರ ಹಾಗೂ ಸಮಾಜದಲ್ಲಿ ಆತ್ಮಜ್ಞಾನ ಮೂಡಿಸುವ ಕಾರ್ಯದಲ್ಲಿ ಶಂಕರಾಚಾರ್ಯರ ಪಾತ್ರ ಅನನ್ಯವಾಗಿದೆ. ಅವರು ಬೋಧಿಸಿದ ಅದ್ವೈತ ತತ್ವವು ಮಾನವ ಜೀವನದ ಸಾರ್ಥಕತೆಯನ್ನು ತಿಳಿಸುವ ಮಹತ್ವದ ಸಂದೇಶವಾಗಿದೆ ಎಂದು ತಿಳಿಸಿದರು.

ಭಾರತದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಧಾರ್ಮಿಕ ಏಕತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸಿದ ಮಹಾನ್ ದೃಷ್ಟಿವಂತರಾಗಿದ್ದರು. ಇಂದಿನ ಯುವಜನತೆ ಶಂಕರಾಚಾರ್ಯರ ಆದರ್ಶಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಬ್ರಾಹ್ಮಣ ಸಮಾಜದ ಹಿರಿಯರಾದ ಕೇಶವ ಅಯ್ಯಂಗಾರ್ ಮಾತನಾಡಿ ರಾಮಾನುಜಾಚಾರ್ಯರು ಭಕ್ತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಆಚಾರ್ಯರಾಗಿದ್ದರು. ಸಮಾಜದಲ್ಲಿ ಜಾತಿ ಭೇದಭಾವವನ್ನು ತೊಡೆದುಹಾಕಿ ಎಲ್ಲರಿಗೂ ದೇವರ ಭಕ್ತಿ ಮಾರ್ಗವನ್ನು ತೆರೆದವರು ಅವರು ಎಂದು ಹೇಳಿದರು.

ವಿಶಿಷ್ಟಾದ್ವೈತ ತತ್ವದ ಮೂಲಕ ಭಕ್ತಿ ಮತ್ತು ಜ್ಞಾನ ಎರಡನ್ನೂ ಸಮನ್ವಯಗೊಳಿಸಿದ ರಾಮಾನುಜಾಚಾರ್ಯರು ಜನಸಾಮಾನ್ಯರಿಗೆ ಧರ್ಮದ ಸಾರವನ್ನು ಸರಳವಾಗಿ ತಿಳಿಸಿಕೊಟ್ಟರು. ದೇವರ ಸೇವೆಯ ಜೊತೆಗೆ ಮಾನವ ಸೇವೆಯೂ ಸಮಾನ ಮಹತ್ವದ್ದೆಂಬ ಸಂದೇಶವನ್ನು ಅವರು ನೀಡಿದರು.

ರಾಮಾನುಜಾಚಾರ್ಯರು ದೇವಾಲಯ ವ್ಯವಸ್ಥೆ, ಧಾರ್ಮಿಕ ಆಚರಣೆಗಳು ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ಪ್ರೇರಣೆಯಾಗಿದ್ದು, ಯುವಜನತೆ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಭಜನೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬ್ರಾಹ್ಮಣರ ಬೀದಿಯಲ್ಲಿ ಒಂದು ಸುತ್ತು ಮರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶಿವಪ್ರಕಾಶ್ ಧನಾವತ್, ಉಪಾಧ್ಯಕ್ಷ ರಘೋತ್ತಮ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಸರೋಜಾ ಶ್ರೀನಿವಾಸ್, ಕಾರ್ಯದರ್ಶಿ ರಮಾ ಸತೀಶ್, ಸಮಾಜದ ಮುಖಂಡರುಗಳಾದ ಮಂಜುನಾಥ ಪ್ರಸಾದ್, ಅನಂತರಾಮ್, ರಘುರಾಮ್,ಶ್ರೀಕಾಂತ್, ವೆಂಕಟೇಶ್ ಹತ್ವಾರ್, ಸುರೇಶ್ ಸೇರಿದಂತೆ ಸಮಾಜದ ಮಹಿಳೆಯರು, ಇತರ ಸದಸ್ಯರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *