ಬೇಲೂರು : ಕಾಡಾನೆ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ತೆರಳಿದ್ದ ಇಟಿಎಫ್ ಸಿಬ್ಬಂದಿ ಮೇಲೆಯೆ ಕಾಡಾನೆಯೊಂದು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಬೇಲೂರು-ಮೂಡಿಗೆರೆ ರೇಂಜ್‌ನ ಹುನುಗನಹಳ್ಳಿ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ಘಟನೆ ವಿವರ : ಬೇಲೂರು ಹಾಗೂ ಮೂಡಿಗೆರೆ ಅಂಚಿನ ಹುನುಗನಹಳ್ಳಿಯ ಹಾಸ್ಟೆಲ್ ಕಾಡಿನ ಬಳಿ ಕಾಡಾನೆ ಇರುವುದನ್ನು ಬೇಲೂರಿನ ಇಟಿಎಫ್ ಸಿಬ್ಬಂದಿಗಳು ಗುರುವಾರ ಬೆಳಗ್ಗೆ ಟ್ರ್ಯಾಕ್ ಮಾಡಿದ್ದರು. ಇದನ್ನು ಖಚಿತಪಡಿಸಿಕೊಳ್ಳಲು ಮೂಡಿಗೆರೆ ರೇಂಜ್‌ನ ಇಟಿಎಫ್‌ನ ಮೂವರು ಸಿಬ್ಬಂದಿಗಳು ಹಾಸ್ಟೆಲ್ ಕಾಡಿನ ಬಳಿ ತೆರಳಿದ್ದಾರೆ. ಆ ಸಮಯದಲ್ಲೆ ಅಲ್ಲೆ ಅಡಗಿ ಕುಳಿತಿದ್ದ ಸಲಗವೊಂದು ಸಿಬ್ಬಂದಿಗಳ ಮೇಲೆ ಏಕಾಏಕಿ ದಾಳಿ ನಡೆಸಲು ಮುಂದಾಗಿದೆ. ಕಾಡಾನೆಯನ್ನು ಕಂಡ ಸಿಬ್ಬಂದಿಗಳು ಅಲ್ಲಿಂದ ಓಡಲು ಪ್ರಯತ್ನಿಸಿದರಾದರೂ ರಮೇಶ್ ಎಂಬುವವರ ಮೇಲೆ ದಾಳಿ ಮಾಡಿ ಇನ್ನುಳಿದ ಇಬ್ಬರು ಸಿಬ್ಬಂದಿಗಳನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯಲ್ಲಿ ರಮೇಶ್ ಎಂಬುವವರ ತೊಡೆಗೆ ಗಾಯವಾಗಿದ್ದು ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಗೊಂಡವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ರಮೇಶ್‌ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೇಲೂರು ಹಾಗೂ ಮೂಡಿಗೆರೆ ಅರಣ್ಯಾಧಿಕಾರಿಗಳು ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಬೇಲೂರು-ಮೂಡಿಗೆರೆ ರೇಂಜ್ ವ್ಯಾಪ್ತಿ ನಡೆದ ಕಾಡಾನೆ ದಾಳಿಯಲ್ಲಿ ಗಾಯಗೊಂಡ ಇಟಿಎಫ್ ಗಾರ್ಡ್ ರಮೇಶ್‌ರವರ ಯೋಗಕ್ಷೇಮವನ್ನು ವಿಚಾರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *