ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಕೂಡಿಗೆಯಲ್ಲಿರುವ ಹೆಚ್.ವಿ. ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿದ್ದ ಸುಮಾರು 500 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಕಳುವಾಗಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಶಾಲೆಯ ಅಡಿಗೆ ಕೋಣೆಯ ಮೇಲ್ಚಾವಣಿಯಲ್ಲಿ ಅಳವಡಿಸಲಾಗಿದ್ದ ಸಿಂಟೆಕ್ಸ್ ಟ್ಯಾಂಕ್ ಕಾಣೆಯಾಗಿರುವುದನ್ನು ಗಮನಿಸಿದ ಶಾಲಾ ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ವಿದ್ಯಾರ್ಥಿಗಳ ಕುಡಿಯುವ ನೀರು ಹಾಗೂ ಬಿಸಿಯೂಟ ತಯಾರಿಕೆಗೆ ಬಳಸಲಾಗುತ್ತಿದ್ದ ಸಿಂಟೆಕ್ಸ್ ಕಳುವಾಗಿರುವುದರಿಂದ ಶಾಲೆಯಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.

ವಿಶೇಷವಾಗಿ ಶಾಲೆಯ ಪ್ರಾರಂಭೋತ್ಸವದ ದಿನದಂದೇ ಈ ಘಟನೆ ನಡೆದಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲೆಯ ಮುಂಭಾಗದ ಪ್ರವೇಶ ದ್ವಾರಕ್ಕೆ ಸಮರ್ಪಕ ಬೀಗದ ವ್ಯವಸ್ಥೆ ಇಲ್ಲದಿರುವುದು ಮತ್ತು ಶಾಲೆ ಗ್ರಾಮದ ಪ್ರಮುಖ ವೃತ್ತದ ಸಮೀಪದಲ್ಲಿರುವುದರಿಂದ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಅಪರಿಚಿತರು ಶಾಲಾ ಆವರಣದಲ್ಲಿ ಅನಗತ್ಯವಾಗಿ ತಿರುಗಾಡುತ್ತಾ ಕುಳಿತುಕೊಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಶಾಲೆಯ ಆಸ್ತಿ-ಪಾಸ್ತಿಗಳಿಗೆ ಭದ್ರತೆ ಇಲ್ಲದಂತಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ. ಕಳ್ಳತನ ನಡೆದಿರುವ ಸಿಂಟೆಕ್ಸ್ ಅನ್ನು ಶೀಘ್ರ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಬೇಕು. ಜೊತೆಗೆ ಶಾಲಾ ಆವರಣದಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಅನಧಿಕೃತವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಂಡು ನಿಯಮಿತ ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸದಸ್ಯರು ಆಗ್ರಹಿಸಿದ್ದಾರೆ.

ಶಾಲೆಯಂತಹ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಳ್ಳತನ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕೂಡಲೇ ಗಮನಹರಿಸಿ ಶಾಲೆಗೆ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *