ಸಕಲೇಶಪುರ, ಜೂನ್ 14: ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಅಭಿವೃದ್ಧಿ, ಸಮರ್ಪಕ ನಿರ್ವಹಣೆ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಮಹತ್ವದ ಸಭೆ ನಡೆಯಿತು.

ಎಂಟು ಗ್ರಾಮದ ಗ್ರಾಮಸ್ಥರು ಹಾಗೂ ಸಂಘ ಪರಿವಾರದ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನ ಕಮಿಟಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬೈರಮುಡಿ ಬಿ.ಎನ್. ಸುಬ್ರಾಯ್ ಗೌಡ ಅವರನ್ನು ದೇವಸ್ಥಾನ ಕಮಿಟಿಯ ಅಧ್ಯಕ್ಷರಾಗಿ ಹಾಗೂ ಯೋಗೇಂದ್ರ ನೆಲಗಳ್ಳಿ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಸಭೆಯಲ್ಲಿ ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು, ಭಕ್ತರು ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು ಧಾರ್ಮಿಕ ಕ್ಷೇತ್ರದ ಶಿಸ್ತು, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಕುರಿತು ಚರ್ಚಿಸಲಾಯಿತು.

ಸಭೆಯ ಬಳಿಕ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಧಾರ್ಮಿಕ ಸ್ಥಳಗಳ ಗೌರವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಹಾಗೂ ದೇವಸ್ಥಾನ ಕಮಿಟಿ ಸದಸ್ಯ ಸಂಗ್ರಾಮ್ ಗೌಡ ಅವರು ಪ್ರವಾಸಿಗರಿಗೆ ಹೂವುಗಳನ್ನು ನೀಡಿ, ದೇವಸ್ಥಾನದ ಸ್ವಚ್ಛತೆ ಹಾಗೂ ಪಾವಿತ್ರ್ಯತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

ನೂತನ ಕಮಿಟಿಯ ನೇತೃತ್ವದಲ್ಲಿ ಬೆಟ್ಟದ ಭೈರವೇಶ್ವರ ದೇವಸ್ಥಾನ ಇನ್ನಷ್ಟು ಅಭಿವೃದ್ಧಿ ಹೊಂದಿ, ಭಕ್ತರು ಹಾಗೂ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸುಧೀರ್ ಭಟ್, ಹೂಡಚಳ್ಳಿ ಲೋಕೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವಲಕೆರೆ ಉಮೇಶ್ ವಾಜಿಗೆ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ಸುನಿಲ್ ಸೇರಿದಂತೆ ಎಂಟು ಗ್ರಾಮದ ಗ್ರಾಮಸ್ಥರು, ಸಂಘ ಪರಿವಾರದ ಪ್ರಮುಖರು ಹಾಗೂ ಭಕ್ತರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *