
ಸಕಲೇಶಪುರ: ಸಾರಿಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದ ಮೇಲೆ ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದ್ದು, ವಾಹನ ಮಾಲೀಕರು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮನವಿ ಮಾಡಿದೆ.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಟಿಡಿ 27 ಟಿಡಿಒ 2023 (ದಿನಾಂಕ: 4 ಜೂನ್ 2026) ಅನ್ವಯ ಈ ವಿಶೇಷ ರಿಯಾಯಿತಿ ಯೋಜನೆ ಜಾರಿಗೊಳಿಸಲಾಗಿದೆ. 1991ರಿಂದ 2022ರವರೆಗೆ ದಾಖಲಾಗಿದ್ದು, ಇನ್ನೂ ದಂಡ ಪಾವತಿಗೆ ಬಾಕಿ ಉಳಿದಿರುವ ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಈ ಸೌಲಭ್ಯ ಅನ್ವಯವಾಗಲಿದೆ.
ಸರ್ಕಾರದ ಆದೇಶದಂತೆ ಜೂನ್ 21ರಿಂದ ಜುಲೈ 10ರವರೆಗೆ, ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ವಾಹನ ಮಾಲೀಕರು ಬಾಕಿ ಇರುವ ದಂಡದ ಮೊತ್ತದ ಶೇ.50ರಷ್ಟನ್ನು ಪಾವತಿಸುವ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಈ ಯೋಜನೆಯ ಕುರಿತು ಹೆಚ್ಚಿನ ಸಂಖ್ಯೆಯ ವಾಹನ ಮಾಲೀಕರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಸ್ಥಳೀಯ ದಿನಪತ್ರಿಕೆಗಳು, ಸುದ್ದಿ ವಾಹಿನಿಗಳು, ಡಿಜಿಟಲ್ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಾರಿಗೆ ಇಲಾಖೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದು ಅಪರೂಪದ ಅವಕಾಶವಾಗಿದ್ದು, ಅರ್ಹ ವಾಹನ ಮಾಲೀಕರು ಸರ್ಕಾರದ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಅಧಿಕಾರಿಗಳು ಕೋರಿದ್ದಾರೆ.
