
ಸಕಲೇಶಪುರ: ರೈತರ ಆತ್ಮಹತ್ಯೆ ಯೋಜನೆಯನ್ನು ಯಾವುದೇ ರೀತಿಯ ಪ್ರಚಾರಾತ್ಮಕ ಯೋಜನೆಯಾಗಿ ಪರಿಗಣಿಸದೆ, ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪರಿಹಾರ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಪ್ರಕರಣಗಳು ಹಾಗೂ ಬಣವೆ ನಷ್ಟ ಯೋಜನೆಗಳಡಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರಧನ ಸುಲಭವಾಗಿ ಮತ್ತು ವಿಳಂಬವಿಲ್ಲದೆ ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೃತ ರೈತರ ವಾರಸುದಾರರು ಸಲ್ಲಿಸಬೇಕಾದ ದಾಖಲೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಭೆಯ ಮುಂದೆ ಮಂಡನೆಯಾದ ರೈತರ ಆತ್ಮಹತ್ಯೆ ಪ್ರಕರಣಗಳಾದ ಯಸಳೂರು ಹೋಬಳಿಯ ಸಂತಹಳ್ಳಿ ಗ್ರಾಮದ ದಿವಾಕರ ಎಸ್.ಜಿ. (ಗುಂಡಪ್ಪ ಅವರ ಪುತ್ರ) ಹಾಗೂ ಗೊದ್ದು ಗ್ರಾಮದ ತಿಪ್ಪೇಗೌಡ ಬಿ.ಕೆ. (ಕಾವೇರಿಗೌಡ ಅವರ ಪುತ್ರ) ಅವರ ಪ್ರಕರಣಗಳನ್ನು ಪರಿಶೀಲಿಸಿ, ಅರ್ಹ ಪ್ರಕರಣಗಳಿಗೆ ನಿಯಮಾನುಸಾರ ಪರಿಹಾರ ಮೊತ್ತ ಶಿಫಾರಸು ಮಾಡಲು ತೀರ್ಮಾನಿಸಲಾಯಿತು ಎಂದರು.
ಇದೇ ವೇಳೆ ರೈತರ ಆಕಸ್ಮಿಕ ಮರಣ ಪ್ರಕರಣಗಳಾದ ಯಸಳೂರು ಹೋಬಳಿಯ ಕರಗೂರು ಗ್ರಾಮದ ಕೆ.ಎನ್. ಪ್ರಕಾಶ್ (ನಂಜೇಗೌಡ ಅವರ ಪುತ್ರ) ಹಾಗೂ ಹಾನುಬಾಳು ಹೋಬಳಿಯ ಚಿಗನಹಳ್ಳಿ ಗ್ರಾಮದ ನಂಜಯ್ಯ (ಕರಿಯಯ್ಯ ಅವರ ಪುತ್ರ) ಅವರ ಪ್ರಕರಣಗಳನ್ನೂ ಸಭೆಯಲ್ಲಿ ಪರಿಗಣಿಸಿ, ತಲಾ ₹2 ಲಕ್ಷ ಪರಿಹಾರ ಮಂಜೂರಾತಿಗೆ ಮುಂದಿನ ಕ್ರಮ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರಧನ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ದಾಖಲೆಗಳನ್ನು ಶೀಘ್ರವಾಗಿ ಸಂಗ್ರಹಿಸಿ, ಪ್ರಕರಣಗಳ ವಿಲೇವಾರಿಯನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕುಣಿಗನಹಳ್ಳಿ ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲದ ಶೇಕಡಾ 25 ಅನುದಾನದಡಿ ಶವ ಸಂಸ್ಕಾರ ನೆರವು, ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಒಬ್ಬ ಎಂ.ಎ. ವಿದ್ಯಾರ್ಥಿಯ ವ್ಯಾಸಂಗಕ್ಕೆ ಆರ್ಥಿಕ ಸಹಾಯ ನೀಡಿರುವುದಾಗಿ ಮಾಹಿತಿ ನೀಡಲಾಯಿತು.
ಈ ಸಂಧರ್ಭದಲ್ಲಿ ಸಕಲೇಶಪುರ ಉಪವಿಭಾಗದ ಕೃಷಿ ಉಪ ನಿರ್ದೇಶಕ ಪ್ರಭಾಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್, ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಮನು, ಕೃಷಿ ಪರಿಕರಗಳ ಮಾರಾಟ ಸಂಘದ ಮಾಜಿ ಅಧ್ಯಕ್ಷ ಸಹನಾ ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ರೈತರು ಉಪಸ್ಥಿತರಿದ್ದರು.
