ಸಕಲೇಶಪುರ, ಜೂನ್ 25: ತಾಲೂಕಿನ ಕಣಗಲು ಮನೆ ಮರಳು ಸಂಗ್ರಹ ಕೇಂದ್ರದಲ್ಲಿ ವ್ಯಾಪಕ ಪ್ರಮಾಣದ ಅಕ್ರಮ ಮರಳು ದೋಚಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದರಿಂದ ಗುತ್ತಿಗೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ವಿವಿಧ ಮರಳು ಸಂಗ್ರಹ ಕೇಂದ್ರಗಳ ಹರಾಜು ಎರಡು ತಿಂಗಳ ಹಿಂದೆ ನಡೆದಿದ್ದು, ಕಣಗಲು ಮನೆ ಮರಳು ಕೇಂದ್ರವನ್ನು ರಾಜ್ ಕನ್ಸ್ಟ್ರಕ್ಷನ್ ಸಂಸ್ಥೆಯ ಉತ್ತಮ್ ಅವರು ಸುಮಾರು ₹80 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಂಡಿದ್ದರು. ಸರ್ಕಾರದ ನಿಯಮಾನುಸಾರ ಗುತ್ತಿಗೆ ಪಡೆದಿದ್ದರೂ, ಕಾರ್ಯಾರಂಭಕ್ಕೂ ಮುನ್ನವೇ ಕೆಲವರು ಅಕ್ರಮವಾಗಿ ಮರಳು ಸಾಗಾಟ ಮತ್ತು ಮಾರಾಟ ನಡೆಸಿರುವುದಾಗಿ ಆರೋಪಿಸಲಾಗಿದೆ.

ಗುತ್ತಿಗೆದಾರರ ಮಾಹಿತಿ ಪ್ರಕಾರ, ಸುಮಾರು 250ಕ್ಕೂ ಹೆಚ್ಚು ಲಾರಿ ಲೋಡ್‌ಗಳಷ್ಟು ಮರಳನ್ನು ಅಕ್ರಮವಾಗಿ ಎತ್ತಿ ಸಾಗಿಸಿ ಮಾರಾಟಕ್ಕಾಗಿ ಸಂಗ್ರಹಿಸಿಡಲಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಅಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಟ ಇನ್ನೂ ಆರಂಭವಾಗದಿದ್ದರೂ ಅಕ್ರಮ ಚಟುವಟಿಕೆಗಳು ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗುತ್ತಿಗೆದಾರ ಉತ್ತಮ್, “ಸರ್ಕಾರದ ನಿಯಮಗಳನ್ನು ಪಾಲಿಸಿ ದೊಡ್ಡ ಮೊತ್ತದ ಬಂಡವಾಳ ಹೂಡಿ ಗುತ್ತಿಗೆ ಪಡೆದಿದ್ದೇವೆ. ಆದರೆ ಕೆಲವರು ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಆದಾಯ ನಷ್ಟವಾಗುತ್ತಿದ್ದು, ಗುತ್ತಿಗೆದಾರರಿಗೂ ಭಾರೀ ಆರ್ಥಿಕ ಹೊರೆ ಉಂಟಾಗಿದೆ” ಎಂದು ಆರೋಪಿಸಿದರು

ಇದಲ್ಲದೆ, ಅಕ್ರಮ ಚಟುವಟಿಕೆಗಳಲ್ಲಿ ಕೆಲವು ಪ್ರಭಾವಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರವಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕಣಗಲು ಮನೆ ಮರಳು ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗುತ್ತಿಗೆದಾರರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಸರ್ಕಾರದ ಆದಾಯಕ್ಕೆ ಧಕ್ಕೆ ಉಂಟುಮಾಡುವ ಇಂತಹ ಅಕ್ರಮಗಳನ್ನು ತಡೆಯಲು ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *