ಸಕಲೇಶಪುರ : ಅಂತರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ, ಪ್ರಗತಿಪರ ಚಿಂತಕ ಹಾಗೂ ಜನಪರ ಹೋರಾಟಗಾರ ಶಿವಪ್ರಸಾದ್ ಅವರ ನಿಧನವು ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ.

ಮತ್ತೊಬ್ಬ ಶಿವಪ್ರಸಾದ್ ಇನ್ನು ನಮ್ಮೊಂದಿಗಿಲ್ಲ ಎಂಬ ಸಂಗತಿ ಅಪಾರ ದುಃಖವನ್ನುಂಟು ಮಾಡಿದೆ.ಹಾಸನ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಉದ್ಯಮಶೀಲರಾದ ಎಲ್.ಟಿ. ಕಾರ್ಲೆ ಅವರ ಪುತ್ರರಾದ ಶಿವಪ್ರಸಾದ್ ಅವರು ಜಿಲ್ಲೆಯ ರೈತ ಚಳುವಳಿಯ ಹುಟ್ಟಿಗೆ ಕಾರಣರಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

1980ರ ದಶಕದಲ್ಲಿ ಅವರು ಬಾಳುಪೇಟೆಯಲ್ಲಿ ವಾಸವಾಗಿದ್ದರು. ಆ ಸಮಯದಲ್ಲಿ ಸಮೀಪದ ರಾಜೇಂದ್ರಪುರ ಗ್ರಾಮದಲ್ಲಿ ನಡೆದ ಒಂದು ಘಟನೆ ಅವರ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸಿತು. ಆ ಗ್ರಾಮದಲ್ಲಿ ಹಲವು ಬಡ ಕುಟುಂಬಗಳು ವಾಸವಾಗಿದ್ದವು. ಅವುಗಳಲ್ಲಿ ಪುಟ್ಟಯ್ಯ ಎಂಬ ದಲಿತ ಕೃಷಿ ಕಾರ್ಮಿಕರ ಕುಟುಂಬವೂ ಒಂದಾಗಿತ್ತು.

ಗ್ರಾಮದ ಐತಾಳ್ ಎಂಬ ರಾಜಕೀಯ ಪ್ರಭಾವ ಹೊಂದಿದ್ದ ವ್ಯಕ್ತಿಯೊಬ್ಬರು ಪುಟ್ಟಯ್ಯ ಅವರ ಮನೆಗೆ ಹೋಗುವ ದಾರಿಯನ್ನು ಬೇಲಿಯಿಂದ ಮುಚ್ಚಿ, ಕುಟುಂಬವನ್ನು ದಿಗ್ಬಂಧನಕ್ಕೆ ಒಳಪಡಿಸಿದ್ದರು. ಈ ವಿಚಾರ ತಿಳಿದ ತಕ್ಷಣ ಶಿವಪ್ರಸಾದ್ ಅವರು ಹೋರಾಟಕ್ಕೆ ಮುಂದಾದರು. ಆ ಸಂದರ್ಭದಲ್ಲಿ ನಾನು ಸಕಲೇಶಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷನಾಗಿದ್ದೆ. ಇದು 1982-83ರ ಅವಧಿಯಲ್ಲಿ ನಡೆದ ಘಟನೆ.

ಶಿವಪ್ರಸಾದ್ ಅವರ ಕರೆಯ ಮೇರೆಗೆ ನಾವು ಎಲ್ಲರೂ ಅಲ್ಲಿಗೆ ತೆರಳಿ, ಅವರ ನೇತೃತ್ವದಲ್ಲಿ ಆ ಬೇಲಿಯನ್ನು ತೆರವುಗೊಳಿಸಿ ಪುಟ್ಟಯ್ಯ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಿದ್ದೇವೆ. ಬಳಿಕ ಐತಾಳ್ ಅವರು ತಮ್ಮ ರಾಜಕೀಯ ಪ್ರಭಾವ ಹಾಗೂ ಬೆಂಬಲಿಗರನ್ನು ಬಳಸಿಕೊಂಡು ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು ಮತ್ತು ಶಿವಪ್ರಸಾದ್ ಅವರಿಗೆ ಜೀವ ಬೆದರಿಕೆ ಹಾಕಿದರು.

ಇದನ್ನು ಪ್ರತಿಭಟಿಸಿ ಬಾಳುಪೇಟೆಯಿಂದ ಸಕಲೇಶಪುರ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ 500ಕ್ಕೂ ಹೆಚ್ಚು ಜನರು ಪ್ರತಿಭಟನಾ ಮೆರವಣಿಗೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ಹೋರಾಟದ ಫಲವಾಗಿ ಪುಟ್ಟಯ್ಯ ಅವರ ಮನೆಗೆ ವಿಧಿಸಲಾಗಿದ್ದ ದಿಗ್ಬಂಧನ ತೆರವುಗೊಂಡು, ಆ ರಸ್ತೆಯನ್ನು ಕಾನೂನುಬದ್ಧ ಸಾರ್ವಜನಿಕ ರಸ್ತೆಯಾಗಿ ಘೋಷಿಸಲಾಯಿತು. ಅದರ ಪರಿಣಾಮವಾಗಿ ಆ ಕುಟುಂಬ ಇಂದು ನೆಮ್ಮದಿಯ ಜೀವನ ನಡೆಸುತ್ತಿದೆ.

1983ರಲ್ಲಿ ಬಾಳುಪೇಟೆಯ ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಲಾದ ಸಂದರ್ಭದಲ್ಲಿ ದಲಿತರು ಮತ್ತು ಸವರ್ಣೀಯರ ನಡುವಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶಿವಪ್ರಸಾದ್ ಅವರ ಪಾತ್ರ ಮಹತ್ವದ್ದಾಗಿತ್ತು.

ಶಿವಪ್ರಸಾದ್ ಅವರ ಕಲಾಕೃತಿಗಳು ಹಳ್ಳಿಯ ಜೀವನ, ಪ್ರಕೃತಿ ಹಾಗೂ ಪ್ರಾಣಿ-ಪಕ್ಷಿಗಳ ಬದುಕನ್ನು ಆಧಾರವಾಗಿಸಿಕೊಂಡಿದ್ದವು. ಅವರ ಸೃಜನಶೀಲ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ. ಅವರು ಅತ್ಯುತ್ತಮ ವಾಸ್ತುಶಿಲ್ಪಿಯಾಗಿಯೂ ಗುರುತಿಸಿಕೊಂಡಿದ್ದರು. ತೇಜಸ್ವಿ ಅವರ ಮನೆ ಹಾಗೂ ಕುಪ್ಪಳ್ಳಿಯಲ್ಲಿರುವ ಶಾಂತಿವನ ಸೇರಿದಂತೆ ಹಲವು ಕಟ್ಟಡಗಳ ವಿನ್ಯಾಸದಲ್ಲಿ ಅವರ ಕೊಡುಗೆ ಅಳಿಸಲಾಗದಂತದ್ದು.

ತಳಸಮುದಾಯದ ಜನರನ್ನು ತಮ್ಮ ಕುಟುಂಬದವರಂತೆ ಕಾಣುತ್ತಿದ್ದ ಅವರು, ಅವರೊಂದಿಗೇ ಬದುಕು ಸಾಗಿಸಿದ ಧೀಮಂತ ನಾಯಕರು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ ಮತ್ತು ಲೋಹಿಯಾ ಅವರ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಇಂತಹ ಮಹನೀಯರನ್ನು ಮರೆಯುವುದು ಸಾಧ್ಯವೇ ಇಲ್ಲ.ಗೆಳೆಯ ಶಿವಪ್ರಸಾದ್ ಅವರಿಗೆ ನನ್ನ ಕೊನೆಯ ನಮನಗಳು.

ವಂದನೆಗಳೊಂದಿಗೆ : ಹೆಚ್.ಎಂ. ವಿಶ್ವನಾಥ್ ಮಾಜಿ ಶಾಸಕರು, ಸಕಲೇಶಪುರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *