
ಬೇಲೂರು : ಪರಿಸರ ಸಂರಕ್ಷಣೆ ಹಾಗೂ ಹಸಿರು ನಿರ್ಮಾಣದ ಉದ್ದೇಶದಿಂದ ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಬೇಲೂರು ಪುರಸಭೆ ವತಿಯಿಂದ ಪಟ್ಟಣದ 6ನೇ ವಾರ್ಡ್‌ನ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸುವ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್, ಸಾಲುಮರದ ತಿಮ್ಮಕ್ಕ ಅವರು ಇಂದಿನ ಪೀಳಿಗೆಗೆ ಕೇವಲ ಒಂದು ಹೆಸರಲ್ಲ, ಪರಿಸರ ಸಂರಕ್ಷಣೆಯ ಜೀವಂತ ಪ್ರತೀಕವಾಗಿದ್ದಾರೆ ಎಂದು ಹೇಳಿದರು.
ಮಕ್ಕಳಿಲ್ಲದ ನೋವನ್ನು ಮರೆಯಲು ಗಿಡಗಳನ್ನೇ ತಮ್ಮ ಮಕ್ಕಳಂತೆ ಪ್ರೀತಿಸಿ ಬೆಳೆಸಿದ ಅವರ ಜೀವನಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಹವಾಮಾನ ವೈಪರೀತ್ಯಗಳಿಗೆ ಕಾಡುಗಳ ನಾಶವೇ ಪ್ರಮುಖ ಕಾರಣವಾಗಿದ್ದು, ಕಾಂಕ್ರೀಟ್ ಕಾಡುಗಳ ನಡುವೆ ಹಸಿರನ್ನು ಬೆಳೆಸುವ ಪ್ರಯತ್ನಗಳು ಅತ್ಯಂತ ಅಗತ್ಯ ಎಂದು ತಿಳಿಸಿದರು.
ಹಸಿರು ಭೂಮಿ ಪ್ರತಿಷ್ಠಾನ, ಪುರಸಭೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಕರೆ ನೀಡಿದರು.
ವಾರ್ಡ್ ಸದಸ್ಯೆ ಸೌಮ್ಯ ಸುಬ್ರಹ್ಮಣ್ಯ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾಲುಮರದ ತಿಮ್ಮಕ್ಕ ಅವರ ಬದುಕು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.
ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಸಂಸ್ಕೃತಿ ಪ್ರತಿಯೊಬ್ಬರಲ್ಲೂ ಬೆಳೆಸಬೇಕು. 6ನೇ ವಾರ್ಡ್‌ನ ಉದ್ಯಾನವನವನ್ನು ಮಕ್ಕಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿ, ಆಟದ ಸಾಮಗ್ರಿಗಳನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ಬೇಲೂರು ಪುರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಗಿಡ ನೆಡುವ ಮೂಲಕ ಗೌರವ ಸಲ್ಲಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ತಿಮ್ಮಕ್ಕ ಅವರು ಕೇವಲ ಮರಗಳನ್ನು ನೆಟ್ಟವರಲ್ಲ, ಮುಂದಿನ ಪೀಳಿಗೆಗೆ ಉಸಿರು ಮತ್ತು ನೆರಳನ್ನು ಕೊಟ್ಟ ಮಹಾನ್ ವ್ಯಕ್ತಿತ್ವ ಎಂದು ಬಣ್ಣಿಸಿದರು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಬೆಳೆಸಿದ ಲಕ್ಷಾಂತರ ಮರಗಳ ರೂಪದಲ್ಲಿ ಸದಾ ಜೀವಂತವಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಹಾಸನ ಹಾಗೂ ಬೇಲೂರಿನೊಂದಿಗೆ ತಿಮ್ಮಕ್ಕ ಅವರಿಗೆ ವಿಶೇಷ ನಂಟಿದ್ದು, ಅವರ ನೆನಪಿಗಾಗಿ ಬೇಲೂರಿನಲ್ಲಿ ಪ್ರತಿಮೆ ನಿರ್ಮಿಸಿ, ನಗರದ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್, ಉಪಾಧ್ಯಕ್ಷೆ ಉಷಾ ಸತೀಶ್, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಆರೋಗ್ಯ ಅಧಿಕಾರಿ ಲೋಹಿತ್, ಡಾ. ರಾಜ್ ಅಭಿಮಾನಿ ಬಳಗದ ಅಧ್ಯಕ್ಷ ತೀರ್ಥಂಕರ್ ಸೇರಿದಂತೆ ಹಲವು ಗಣ್ಯರು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
