
ಬೇಲೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಅಂಗವಾಗಿ ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀಕನಹಳ್ಳಿ ಎಸ್ಟೇಟ್‌ಗಳಿಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರ ಮಕ್ಕಳಿಗೂ ಪೋಲಿಯೋ ಲಸಿಕೆ ತಲುಪುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಯಶಸ್ವಿಯಾಗಿ ಲಸಿಕೆ ನೀಡಿದರು.
ಎಸ್ಟೇಟ್ ಪ್ರದೇಶದಲ್ಲಿ ನಿರಂತರ ಮಳೆ, ದುರ್ಗಮ ರಸ್ತೆ, ಕಾಡು ಆನೆಗಳ ಓಡಾಟ ಹಾಗೂ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದರು. ಯಾವುದೇ ಮಗುವೂ ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ತಂಡವು ಪ್ರತಿಯೊಂದು ಕಾರ್ಮಿಕರ ವಸತಿ ಪ್ರದೇಶಕ್ಕೂ ತೆರಳಿ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕುವ ಕಾರ್ಯ ನಡೆಸಿತು.
ವಲಸೆ ಬಂದಿರುವ ಕೂಲಿ ಕಾರ್ಮಿಕರ ಕುಟುಂಬಗಳಲ್ಲಿನ ಮಕ್ಕಳ ವಿವರಗಳನ್ನು ಸಂಗ್ರಹಿಸಿ, ಪೋಷಕರಿಗೆ ಪೋಲಿಯೋ ಲಸಿಕೆಯ ಮಹತ್ವವನ್ನು ತಿಳಿಸಿಕೊಡಲಾಯಿತು.
ಐದು ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಲಸಿಕೆ ನೀಡುವಂತೆ ವಿಶೇಷ ಗಮನಹರಿಸಿ, ಯಾರೊಬ್ಬ ಮಗುವೂ ತಪ್ಪಿಹೋಗದಂತೆ ಸಿಬ್ಬಂದಿ ಕಾರ್ಯನಿರ್ವಹಿಸಿದರು.ಮಳೆ ಮತ್ತು ಕಾಡು ಆನೆಗಳ ಭೀತಿಯ ನಡುವೆಯೂ ಆರೋಗ್ಯ ಸಿಬ್ಬಂದಿ ಸೇವಾ ಮನೋಭಾವದಿಂದ ಕೆಲಸ ಮಾಡಿರುವುದು ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಯಿತು. ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಆರೋಗ್ಯ ಇಲಾಖೆ ಕೈಗೊಂಡಿರುವ ಈ ಕಾರ್ಯ ಮಾದರಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಯುನಾನಿ ವೈದ್ಯಾಧಿಕಾರಿ ಡಾ. ನಾಗೇಶ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಸಿಒ ನೇತ್ರವತಿ, ಆಶಾ ಕಾರ್ಯಕರ್ತೆಯರಾದ ಶಕುಂತಲಾ ಹಾಗೂ ಪುಷ್ಪವತಿ, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
