
ಜು.೧: ಹಾಸನ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಮೂಲ ಉದ್ದೇಶವನ್ನು ಮರೆತು, ಫಲಾನುಭವಿಗಳನ್ನು ವಿವಿಧ ಮಾನದಂಡಗಳ ಹೆಸರಿನಲ್ಲಿ ಫಿಲ್ಟರ್ ಮಾಡುವ ಮೂಲಕ ಬಡವರು ಹಾಗೂ ರೈತರನ್ನು ಯೋಜನೆಗಳಿಂದ ಹೊರಗಿಡುವ ಪ್ರಯತ್ನ ನಡೆಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಆಸರೆಯಾಗಬೇಕು. ಆದರೆ ಸರ್ಕಾರ ಅನಗತ್ಯ ನಿಯಮಗಳನ್ನು ಜಾರಿಗೆ ತಂದು ಅರ್ಹ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸುತ್ತಿದೆ. ಇದು ಯೋಜನೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರಿಗಾಗಿ ರೂಪಿಸಿಲ್ಲ. ಗ್ರಾಮೀಣ ಭಾಗದಲ್ಲಿರುವ ಬಹುತೇಕ ರೈತರು ಮತ್ತು ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇವರನ್ನು ದಾಖಲೆಗಳ ನೆಪದಲ್ಲಿ ಯೋಜನೆಗಳಿಂದ ಹೊರಗಿಡುವುದು ಸರಿಯಲ್ಲ. ಯೋಜನೆಗಳ ಫಲ ಎಲ್ಲ ಅರ್ಹ ಕುಟುಂಬಗಳಿಗೂ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಜೆಟ್ ಉಳಿಸುವ ಉದ್ದೇಶದಿಂದ ಫಲಾನುಭವಿಗಳನ್ನು ಕಡಿತಗೊಳಿಸುವುದು ಜನವಿರೋಧಿ ಕ್ರಮವಾಗಿದೆ ಎಂದರು.
ಸರ್ಕಾರ ಬಡವರ ಕಲ್ಯಾಣದ ಬದ್ಧತೆಯನ್ನು ಉಳಿಸಿಕೊಳ್ಳಬೇಕಾದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಹಾಗೂ ಮಾನವೀಯತೆ ಇರಬೇಕು. ಯೋಜನೆಗಳನ್ನು ಕೇವಲ ಅಂಕಿ-ಅಂಶಗಳ ದೃಷ್ಟಿಯಿಂದ ನೋಡದೆ, ಜನಜೀವನ ಸುಧಾರಿಸುವ ಸಾಧನವಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದರಿಂದ ಹಲವು ಜಿಲ್ಲೆಗಳಲ್ಲಿ ಬರದ ವಾತಾವರಣ ಮುಂದುವರಿದಿದೆ. ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಈಗಾಗಲೇ ಬಿತ್ತನೆಯಾದ ಬೆಳೆಗಳು ಹಾಗೂ ಇನ್ನೂ ಬಿತ್ತನೆಯಾಗಬೇಕಿರುವ ಬೆಳೆಗಳಿಗೆ ಅಗತ್ಯವಿರುವ ರಸಗೊಬ್ಬರ, ಬೀಜ ಮತ್ತು ಕೀಟನಾಶಕಗಳನ್ನು ಸರ್ಕಾರ ಸಕಾಲಕ್ಕೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ರೈತರಿಗೆ ಕೃಷಿ ಪರಿಕರಗಳ ವಿತರಣೆಯಲ್ಲಿ ಅನಗತ್ಯ ನಿಯಮಗಳನ್ನು ಹೇರಲಾಗುತ್ತಿದೆ. ಒಂದು ವಸ್ತು ಪಡೆಯಲು ಮತ್ತೊಂದು ವಸ್ತುವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂಬ ಷರತ್ತುಗಳು ಹಾಗೂ ವಿವಿಧ ಲಿಂಕ್ ವ್ಯವಸ್ಥೆಗಳ ಮೂಲಕ ರೈತರಿಗೆ ಕಿರುಕುಳ ನೀಡಲಾಗುತ್ತಿದೆ.
ಈ ರೀತಿಯ ಕ್ರಮಗಳನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಗೊಬ್ಬರ ಕೊರತೆಗೆ ಯುದ್ಧ ನೆಪ ಬೇಡ, ಉಗ್ರ ಹೋರಾಟದ ಎಚ್ಚರಿಕೆ:ದೇಶದಲ್ಲಿ ಉಂಟಾಗಿರುವ ರಸಗೊಬ್ಬರ ಕೊರತೆಗೆ ಅಂತರರಾಷ್ಟ್ರೀಯ ಯುದ್ಧಗಳನ್ನು ಕಾರಣವಾಗಿ ಹೇಳುವುದು ಸಮಂಜಸವಲ್ಲ. ಯುದ್ಧದ ನೆಪ ಹೇಳಿ ರೈತರನ್ನು ಸಂಕಷ್ಟಕ್ಕೆ ದೂಡುವ ಬದಲು ಅಗತ್ಯವಿದ್ದರೆ ರಷ್ಯಾ, ಚೀನಾ ಸೇರಿದಂತೆ ಇತರ ದೇಶಗಳಿಂದ ಗೊಬ್ಬರವನ್ನು ಆಮದು ಮಾಡಿಕೊಂಡು ಕೊರತೆ ನೀಗಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಹೇಳಿದರು.
ಯುದ್ಧದ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ, ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರ ಅಗತ್ಯ ಪ್ರಮಾಣದ ಗೊಬ್ಬರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ರೈತರಿಗೆ ಸಕಾಲದಲ್ಲಿ ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಸಗೊಬ್ಬರ ಕೊರತೆ ತೀವ್ರವಾಗಿದ್ದು, ರೈತರು ಹಾಗೂ ಅಧಿಕಾರಿಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ನಿರ್ಲಕ್ಷಿಸಿದರೆ ಮತ್ತಷ್ಟು ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕೃಷಿ ಇಲಾಖೆಗೆ ಶೀಘ್ರ ಪೂರ್ಣಾವಧಿ ಸಚಿವರನ್ನು ನೇಮಕ ಮಾಡಬೇಕು. ಇಲಾಖೆಯ ಆಡಳಿತಾತ್ಮಕ ನಿರ್ಧಾರಗಳು ವೇಗವಾಗಿ ಆಗಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಗೊಬ್ಬರ ಕೊರತೆ ಮುಂದುವರಿದರೆ ರಾಜ್ಯಾದ್ಯಂತ ರೈತ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ಪವಿತ್ರ, ವಿಠಲ, ಗಂಗಾಧರ್, ಅಕ್ಮಲ್ ಪಾಷಾ, ಕಾಂತರಾಜು, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.
