
ಸಕಲೇಶಪುರ:-ನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ಮಂಗಳವಾರ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಶಾಲೆಯ ಪ್ರಾಂಶುಪಾಲರಾದ ಸುಮಂತ್ ಭಾರ್ಗವ್ ಮಾತನಾಡಿ, ಮಕ್ಕಳು ಶಾಲೆಗೆ ಹೊರಡುವ ವೇಳೆ ಅವರ ಸಮವಸ್ತ್ರ, ಟೈ, ಬೆಲ್ಟ್, ಶೂ ಹಾಗೂ ಕೈ ಬೆರಳಿನ ಉಗುರುಗಳ ಸ್ವಚ್ಛತೆಯ ಬಗ್ಗೆ ಪೋಷಕರು ಗಮನಹರಿಸಿ ಶಾಲೆಗೆ ಕಳುಹಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸಿದಾಗ, ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆದು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಶಾಲೆಯ ಕಾರ್ಯದರ್ಶಿಗಳಾದ ಅರುಣ್ ರಕ್ಷಿದಿ ಮಾತನಾಡಿ, ಸಕಲೇಶಪುರದಲ್ಲಿ ಪ್ರಪ್ರಥಮವಾಗಿ ರೋಟರಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿ 45 ವರ್ಷಗಳು ಕಳೆದಿದ್ದು, ಶಾಲೆಯ ಯಶಸ್ವಿ ಪಯಣದಲ್ಲಿ ಪೋಷಕರ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಶಾಲೆಯು ಹಣ ಗಳಿಸುವ ಉದ್ದೇಶದಿಂದ ಸ್ಥಾಪನೆಯಾಗಿಲ್ಲ; ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡಬೇಕೆಂಬ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲಾಗಿದೆ.
ಪೋಷಕರ ಸಹಕಾರದಿಂದಲೇ ಶಾಲೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮುಂದೆಯೂ ಇದೇ ರೀತಿಯ ಸಹಕಾರ ಮುಂದುವರಿಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ , ಡಾ.ನವೀನ್ ಚಂದ್ರಶೆಟ್ಟಿ ಮಕ್ಕಳಿಗೆ ಸಮತೋಲನಯುತ ಆಹಾರ ಹಾಗೂ ಉತ್ತಮ ಆರೋಗ್ಯದ ಮಹತ್ವದ ಬಗ್ಗೆ ಪೋಷಕರಲ್ಲಿ ಅರಿವು ಇರಬೇಕು ಎಂದು ಹೇಳಿದರು.
ಮಕ್ಕಳು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಪ್ರತಿನಿತ್ಯ ಒಂದೇ ರೀತಿಯ ಆಹಾರವನ್ನು ನೀಡಬಾರದು. ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರ, ಹಣ್ಣು ಹಾಗೂ ತರಕಾರಿಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಜೊತೆಗೆ, ಮಕ್ಕಳನ್ನು ಮೊಬೈಲ್ ಮತ್ತು ದೂರದರ್ಶನದ ಅತಿಯಾದ ಬಳಕೆಯಿಂದ ದೂರವಿಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ , ಶಾಲೆಯ ಶಿಕ್ಷಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
