ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ರಿ., ಸಕಲೇಶಪುರ ಇದರ ವತಿಯಿಂದ ಆಯೋಜಿಸಲಾದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ. ನವೀನ್ ಚಂದ್ರ ಶೆಟ್ಟಿ ಅವರು ನವಜೀವನ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.

ಆರೋಗ್ಯ, ಶಿಸ್ತು ಮತ್ತು ಮಾನವೀಯತೆಯೇ ಉತ್ತಮ ಜೀವನದ ದಾರಿ:ವ್ಯಸನಗಳನ್ನು ಸಂಪೂರ್ಣವಾಗಿ ತ್ಯಜಿಸಿ ಆರೋಗ್ಯಕರ, ಶಿಸ್ತಿನ ಹಾಗೂ ಮೌಲ್ಯಯುತ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಮದ್ಯಪಾನ, ಗುಟ್ಕಾ, ಗಾಂಜಾ, ಸಿಗರೇಟ್, ಬೀಡಿ ಸೇರಿದಂತೆ ಎಲ್ಲ ರೀತಿಯ ವ್ಯಸನಗಳು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಅಭಿವೃದ್ಧಿಗೆ ಮಾರಕವಾಗಿದ್ದು, ಅವುಗಳನ್ನು ತೊರೆದು ಆತ್ಮವಿಶ್ವಾಸದಿಂದ ಹೊಸ ಬದುಕನ್ನು ಆರಂಭಿಸಬೇಕು ಎಂದು ತಿಳಿಸಿದರು.

ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರೊಂದಿಗೆ ದೇವರ ಮೇಲೆ ಭಕ್ತಿ ಇಟ್ಟು ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳದೆ, ತಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿಕೊಂಡು ತೃಪ್ತಿಯಿಂದ ಬದುಕಿದರೆ ಜೀವನದಲ್ಲಿ ನಿಜವಾದ ಸಂತೋಷ ಸಿಗುತ್ತದೆ ಎಂದು ಹೇಳಿದರು.

ಕುಟುಂಬದ ಜವಾಬ್ದಾರಿಯನ್ನು ಅರಿತು ಹೆಂಡತಿ, ಮಕ್ಕಳು ಹಾಗೂ ಮನೆಯವರೊಂದಿಗೆ ಪ್ರೀತಿ, ಗೌರವ ಮತ್ತು ಕಾಳಜಿಯಿಂದ ಬದುಕಬೇಕು. ಹಣಕ್ಕಿಂತ ಸಂಬಂಧಗಳು ಅಮೂಲ್ಯವಾಗಿದ್ದು, ಮನೆಯಲ್ಲಿ ಶಾಂತಿ ಮತ್ತು ಪರಸ್ಪರ ವಿಶ್ವಾಸವನ್ನು ಬೆಳೆಸಿಕೊಳ್ಳುವುದು ಅಗತ್ಯ , ಜಾತಿ–ಧರ್ಮಕ್ಕಿಂತ ಮಾನವೀಯತೆ ದೊಡ್ಡದು. ಸಮಾಜದಲ್ಲಿ ಮೊದಲು ನಾವು ಬದಲಾಗಬೇಕು, ನಂತರ ಕುಟುಂಬ ಮತ್ತು ಸಮಾಜಕ್ಕೆ ಮಾದರಿಯಾಗಬೇಕು. ಕೃಷಿ, ಪಶುಸಂಗೋಪನೆ ಹಾಗೂ ಸ್ವಯಂ ಉದ್ಯೋಗದಂತಹ ಕ್ಷೇತ್ರಗಳಲ್ಲಿ ತೊಡಗಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.ಮಾನವೀಯ ಮೌಲ್ಯಗಳೊಂದಿಗೆ ಬದುಕಿದರೆ ಸಮಾಜದ ಅಭಿವೃದ್ಧಿ ಸಾಧ್ಯ:ತೀರ್ಥಯಾತ್ರೆ, ಸತ್ಸಂಗ, ಒಳ್ಳೆಯ ಪುಸ್ತಕಗಳ ಓದು ಹಾಗೂ ಮಹನೀಯರ ಜೀವನದಿಂದ ಸ್ಫೂರ್ತಿ ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.

ಸಂಘಟಿತವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಪರಸ್ಪರ ಸಹಕಾರದಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ವ್ಯಸನಗಳನ್ನು ತ್ಯಜಿಸಿ ಆರೋಗ್ಯಕರ ಜೀವನಶೈಲಿ, ಉತ್ತಮ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಕುಟುಂಬದ ಜವಾಬ್ದಾರಿಯೊಂದಿಗೆ ಬದುಕಿದರೆ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇದರ ಯೋಜನಾಧಿಕಾರಿ ಕಿಶೋರ್, ಜನಜಾಗೃತಿ ಮೈಸೂರು ಪ್ರಾದೇಶಿಕ ವಿಭಾಗ ಇದರ ಯೋಜನಾಧಿಕಾರಿ ಮುಖೇಶ್ ಕ್ಷೇತ್ರ ಯೋಜನಾಧಿಕಾರಿ ರಾಜೇಶ್ ಎಂ ಕಾನರ್ಪ, ನವಜೀವನ ಸದಸ್ಯರು, ನವಜೀವನ ಪೋಷಕರು, ಹಾಗೂ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *