
ಸಕಲೇಶಪುರ: ಸೇವಾ ಮನೋಭಾವನೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವವರು ಮಾತ್ರ ರೋಟರಿ ಸಂಸ್ಥೆಯಂತಹ ಸೇವಾ ಸಂಘಟನೆಗಳಲ್ಲಿ ಉತ್ತಮ ನಾಯಕತ್ವ ನೀಡಲು ಸಾಧ್ಯ ಎಂದು ರೋಟರಿಯನ್ ರೈಲಾ ಗವರ್ನರ್ ಮೋಹನ್ ಹೇಳಿದರು.
ತಾಲೂಕಿನ ಹಾನುಬಾಳು ರೋಟರಿ ಸಮುದಾ ಭವನದಲ್ಲಿ ಶನಿವಾರ ನಡೆದ 2026–27ನೇ ಸಾಲಿನ ಹಾನುಬಾಳು ವಲಯ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ ರೋಟರಿ ಸಂಸ್ಥೆ ವಿಶ್ವದ ಅತಿದೊಡ್ಡ ಸೇವಾ ಸಂಘಟನೆಗಳಲ್ಲಿ ಒಂದಾಗಿದ್ದು, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಕುಡಿಯುವ ನೀರು, ಯುವಜನರ ಸಬಲೀಕರಣ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆ ತರಲು ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ಸದಸ್ಯರೂ ತಮ್ಮ ವೈಯಕ್ತಿಕ ಜೀವನದ ಜೊತೆಗೆ ಸಮಾಜದ ಅಭಿವೃದ್ಧಿಗೂ ಸಮಯ ಮೀಸಲಿಡಬೇಕು ಎಂದು ಕರೆ ನೀಡಿದರು.
ನೂತನ ಪದಾಧಿಕಾರಿಗಳು ಅಧಿಕಾರವನ್ನು ಗೌರವವಾಗಿ ಪರಿಗಣಿಸದೆ, ಜವಾಬ್ದಾರಿಯೆಂದು ಅರಿತು ಕಾರ್ಯನಿರ್ವಹಿಸಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ವೃಕ್ಷಾರೋಪಣ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಮಹಿಳಾ ಮತ್ತು ಯುವಜನರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೋಟರಿ ಸಂಸ್ಥೆಯ ಸೇವಾ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ರೋಟರಿ ಜೋನ್–8ರ ಅಸಿಸ್ಟೆಂಟ್ ಗವರ್ನರ್ ಗಣೇಶ್ ಮಾತನಾಡಿ ರೋಟರಿ ಜೋನ್–8ರ ಅಸಿಸ್ಟೆಂಟ್ ಗವರ್ನರ್ ಗಣೇಶ್ ಎಸ್. ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಸೇವಾ ಕಾರ್ಯಗಳ ಮೂಲಕ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿದೆ. ಜಾತಿ, ಧರ್ಮ, ರಾಜಕೀಯ ಭೇದಭಾವವಿಲ್ಲದೆ ಸಮಾಜದ ಎಲ್ಲ ವರ್ಗದ ಜನರಿಗೆ ನೆರವು ನೀಡುವ ಉದ್ದೇಶದಿಂದ ರೋಟರಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸೇವಾ ಸಂಸ್ಥೆಯ ಪದಾಧಿಕಾರಿಗಳಾಗುವುದು ಗೌರವದ ಜೊತೆಗೆ ದೊಡ್ಡ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.
ಸೇವಾ ಮನೋಭಾವನೆ, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಚಿಂತನೆಯುಳ್ಳವರು ಮಾತ್ರ ರೋಟರಿ ಸಂಸ್ಥೆಯ ಆಶಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ. ಪದಾಧಿಕಾರಿಗಳು ಅಧಿಕಾರದ ನಿರೀಕ್ಷೆಯೊಂದಿಗೆ ಅಲ್ಲ, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ಸದಸ್ಯರೂ ತಮ್ಮ ಸಮಯ, ಜ್ಞಾನ ಹಾಗೂ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿದಾಗ ಮಾತ್ರ ರೋಟರಿ ಸಂಸ್ಥೆಯ ಉದ್ದೇಶಗಳು ಸಾಕಾರಗೊಳ್ಳುತ್ತವೆ ಎಂದು ತಿಳಿಸಿದರು.
ರೋಟರಿ ಹಾನುಬಾಳು ವಲಯದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದೇಶ್ ಕೀರ್ತಿ ಮಾತನಾಡಿ ಲಾಟರಿ ಸಂಸ್ಥೆಯ ಎಲ್ಲಾ ಹಿರಿಯ ಹಾಗೂ ಕಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡಲಾಗುತ್ತದೆ ಎಂದರು.
ಸಮಾರಂಭದಲ್ಲಿ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂದೇಶ್ ಕೀರ್ತಿ , ಕಾರ್ಯದರ್ಶಿಯಾಗಿ ನಿಶಾಂತ್ , ಖಜಾಂಚಿಯಾಗಿ ಧನಂಜಯ ಸೇರಿದಂತೆ ವಿವಿಧ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ನೂತನ ಪದಾಧಿಕಾರಿಗಳಿಗೆ ಗಣ್ಯರು ಅಭಿನಂದನೆ ಸಲ್ಲಿಸಿ, ಯಶಸ್ವಿ ಆಡಳಿತಕ್ಕಾಗಿ ಶುಭ ಹಾರೈಸಿದರು.ವೇದಿಕೆಯಲ್ಲಿ ರೋಟರಿ ಝೋನಲ್ ಲೆಫ್ಟಿಂನಂಟ್ ಯು. ವಿ ಪ್ರಕಾಶ್,ನಿಕಟ ಪೂರ್ವ ಅಧ್ಯಕ್ಷ ಗೋಪಾಲ್ ಹಾಗೂ ಕಾರ್ಯದರ್ಶಿ ಅನಿಲ್ ಸೇರಿದಂತೆ ಸಂಸ್ಥೆಯ ಹಿರಿಯ ಸದಸ್ಯರು, ವಲಯದ ವಿವಿಧ ಘಟಕಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
