
ಸಕಲೇಶಪುರ: ಕಳೆದ ಒಂದು ದಶಕದಿಂದ ಸಕಲೇಶಪುರ ಉಪ ವಿಭಾಗದಲ್ಲಿ ಕೇಳಿಬರುತ್ತಿರುವ ಹೆಚ್‌ಆರ್‌ಪಿ (ಮುಳುಗಡೆ ಸಂತ್ರಸ್ತರ ಭೂ ಮಂಜೂರು) ಅವ್ಯವಹಾರ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕರ ದೈನಂದಿನ ಕೆಲಸಗಳು ಸ್ಥಗಿತಗೊಂಡಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆರೋಪಿಸಿದೆ.
ಸರ್ವೆ ಹಾಗೂ ಕಂದಾಯ ಇಲಾಖೆಯ ಹಲವು ಸಿಬ್ಬಂದಿ ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ತಮ್ಮ ಜಮೀನು ದಾಖಲೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ತಾಲೂಕು ಕಚೇರಿ ಮತ್ತು ಸರ್ವೆ ಇಲಾಖೆಗೆ ತೆರಳಿದರೂ, ಖಾಲಿ ಕುರ್ಚಿಗಳನ್ನು ನೋಡಿ ಹಿಂದಿರುಗುವಂತಾಗಿದೆ ಎಂದು ವೇದಿಕೆ ತಿಳಿಸಿದೆ.ಕಚೇರಿಗಳಲ್ಲಿ ಇರುವ ಕೆಲ ಸಿಬ್ಬಂದಿಗೂ ಗೈರುಹಾಜರಾಗಿರುವ ನೌಕರರು ರಜೆಯಲ್ಲಿದ್ದಾರೆಯೇ, ಅಮಾನತುಗೊಂಡಿದ್ದಾರೆಯೇ ಅಥವಾ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆಯೇ ಎಂಬ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.
ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವವರು ನಿರಾಳವಾಗಿ ಓಡಾಡುತ್ತಿರುವಾಗ, ಸಾಮಾನ್ಯ ರೈತರು ಮತ್ತು ಸಾರ್ವಜನಿಕರು ಸರ್ಕಾರಿ ಸೇವೆಗಳಿಂದ ವಂಚಿತರಾಗುತ್ತಿರುವುದು ದುರಂತದ ಸಂಗತಿ ಎಂದು ಕರವೇ ಟೀಕಿಸಿದೆ.
ಈ ಸಂಬಂಧ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಪ್ರಕಟವಾಗುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದೆ.
ಈ ಕೂಡಲೇ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅನಧಿಕೃತವಾಗಿ ಗೈರುಹಾಜರಾಗಿರುವ ಸಿಬ್ಬಂದಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿ, ಅನ್ವಯಿಸುವ ಸೇವಾ ನಿಯಮಗಳಡಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಸರ್ವೆ ಹಾಗೂ ಕಂದಾಯ ಇಲಾಖೆಯ ಖಾಲಿ ಹುದ್ದೆಗಳಿಗೆ ತಕ್ಷಣ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.
