ಆಲೂರು : ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ಪಾರ್ಕಿಂಗ್ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಾಹನ ನಿಲುಗಡೆಗೆ ಸಮರ್ಪಕ ಸ್ಥಳಾವಕಾಶ ಇಲ್ಲದ ಕಾರಣ ಬಸ್ ನಿಲ್ದಾಣ, ತಾಲೂಕು ಆಸ್ಪತ್ರೆ, ಪೊಲೀಸ್ ಠಾಣೆ, ತಾಲೂಕು ಕಚೇರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಆಂಬುಲೆನ್ಸ್ ಹಾಗೂ ಬಸ್‌ಗಳ ಸಂಚಾರಕ್ಕೂ ಅಡಚಣೆ ಎದುರಾಗುತ್ತಿದೆ.

ಬಸ್ ನಿಲ್ದಾಣದಲ್ಲಿಯೇ ಬೈಕ್ ಹಾಗೂ ಕಾರುಗಳನ್ನು ನಿಲ್ಲಿಸುವ ಪ್ರವೃತ್ತಿಯಿಂದ ಪ್ರಯಾಣಿಕರಿಗೂ ಸಂಕಷ್ಟ ಉಂಟಾಗಿದೆ. ಪಟ್ಟಣ ಪಂಚಾಯಿತಿ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳ ಗುರುತಿಸದಿರುವುದು ಹಾಗೂ ಸಂಚಾರ ಪೊಲೀಸರ ಕೊರತೆಯಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿ ಲೋಕೇಶ್ ಅಜ್ಜೇನಹಳ್ಳಿ ಮಾತನಾಡಿ, ಪ್ರಮುಖ ರಸ್ತೆಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ ಅಕ್ರಮ ಪಾರ್ಕಿಂಗ್‌ಗೆ ಕಡಿವಾಣ ಹಾಕಬೇಕು.

ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *