ಸಕಲೇಶಪುರ : ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಚಿತವಾಗಿ ಕ್ರಮ ಕೈಗೊಳ್ಳಬೇಕು. ಪಿಡಿಒಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ಗ್ರಾಮಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಗುರುತಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕುಡಿಯುವ ನೀರಿನ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಶೇ.90ರಷ್ಟು ನಿವಾರಣೆಯಾಗುವ ನಿರೀಕ್ಷೆಯಿದೆ. ಆದರೂ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ವ್ಯತ್ಯಯ, ಮೋಟಾರ್ ಸಂಪರ್ಕ, ಟ್ರಾನ್ಸ್‌ಫಾರ್ಮರ್ ದೋಷ, ಕೊಳವೆಬಾವಿಗಳಲ್ಲಿ ನೀರಿನ ಕೊರತೆ, ಪೈಪ್‌ಲೈನ್ ದುರಸ್ತಿ ಸೇರಿದಂತೆ ಪ್ರತಿಯೊಂದು ಸಮಸ್ಯೆಯ ಮಾಹಿತಿಯನ್ನು ಪಿಡಿಒಗಳು ಸಂಗ್ರಹಿಸಿ ಗ್ರಾಮವಾರು ಕ್ರಿಯಾ ಯೋಜನೆ (ಆಕ್ಷನ್ ಪ್ಲಾನ್) ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.

“ಸಾರ್ವಜನಿಕರು ಕುಡಿಯುವ ನೀರಿಗಾಗಿ ದೂರು ನೀಡುವ ಪರಿಸ್ಥಿತಿ ಬರಬಾರದು. ಪಿಡಿಒಗಳು ಕಚೇರಿಯಲ್ಲೇ ಕುಳಿತುಕೊಳ್ಳದೆ ಗ್ರಾಮಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಕಂದಾಯ, ಅರಣ್ಯ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನೈಜ ವರದಿ ಸಲ್ಲಿಸಬೇಕು” ಎಂದು ಅವರು ಸ್ಪಷ್ಟ ಸೂಚನೆ ನೀಡಿದರು.

ಜಲ ಜೀವನ್ ಮಿಷನ್ (JJM) ಯೋಜನೆಯಡಿ ಬಾಕಿ ಉಳಿದಿರುವ ಮನೆಮನೆಗೆ ನೀರು ಸಂಪರ್ಕದ ವಿವರಗಳನ್ನೂ ಪರಿಶೀಲಿಸಿ, ಯಾವುದೇ ಕುಟುಂಬಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಒಳಪಟ್ಟಿರುವ ಮನೆಗಳು, ಶಾಲೆಗಳು, ಅಂಗನವಾಡಿಗಳು, ಆಸ್ಪತ್ರೆಗಳು, ಸ್ಮಶಾನಗಳು ಹಾಗೂ ಸಾರ್ವಜನಿಕ ಕಟ್ಟಡಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಿಡಿಒಗಳು ಸ್ಥಳ ಪರಿಶೀಲನೆ ನಡೆಸಿ ನೈಜ ವರದಿ ಸಲ್ಲಿಸಿದರೆ, ಸಾರ್ವಜನಿಕರಿಗೆ ಅನ್ಯಾಯವಾಗದಂತೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ವಿದ್ಯುತ್ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಾಗುವ ಹಿನ್ನೆಲೆಯಲ್ಲಿ ದೂರುಗಳು ಬಂದ ಕೂಡಲೇ ಸ್ಪಂದಿಸಬೇಕು. ವಿಶೇಷವಾಗಿ ಜೆಇಗಳು ಸಾರ್ವಜನಿಕರ ದೂರವಾಣಿ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ತ್ವರಿತವಾಗಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

“ದೂರವಾಣಿ ಕರೆ ಸ್ವೀಕರಿಸಿದರೆ ಅರ್ಧ ಸಮಸ್ಯೆ ಅಲ್ಲಿಯೇ ಪರಿಹಾರವಾಗುತ್ತದೆ. ಅಧಿಕಾರಿಗಳು ಜನರೊಂದಿಗೆ ಸಂಪರ್ಕದಲ್ಲಿದ್ದು ತಕ್ಷಣ ಸ್ಪಂದಿಸಬೇಕು” ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಈ ಸಂಧರ್ಭದಲ್ಲಿ ಸಕಲೇಶಪುರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರನ್, ಆಲೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುಭ್ರಮಣ್ಯ, ಹಾಸನ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಸೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಹರೀಶ್, ಆದಿತ್ಯಸೇರಿದಂತೆ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ಕುಡಿಯುವ ನೀರು ಸರಬರಾಜು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಸೆಸ್ಕಾಂನ ಸಹಾಯಕ ಅಭಿಯಂತರರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *