ಅರಸೀಕೆರೆ: ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದ ಪ್ರಾರಂಭೋತ್ಸವ ಹಾಗೂ ಕಳಸಾರೋಹಣ ಕಾರ್ಯಕ್ರಮ ಆ.16 ಮತ್ತು 17ರಂದು ನಡೆಯಲಿದೆ ಎಂದು ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್ ತಿಳಿಸಿದರು.

ದೇವಾಲಯದ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಹಾಗೂ ಸಾನಿಧ್ಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ಆ.16ರಂದು ಮಾಡಾಳು ಗ್ರಾಮದ ಸುತ್ತಮುತ್ತಲಿನ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ದೇವರುಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಸಂಜೆ 4 ಗಂಟೆಗೆ ಗ್ರಾಮದ ಮೂಲ ಸನ್ನಿಧಿಯಲ್ಲಿ ಮುತ್ತೈದೆಯರು ಗಂಗಾಪೂಜೆ ನೆರವೇರಿಸಲಿದ್ದಾರೆ. ನಂತರ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಕೆರೆ ಏರಿಯ ಮೇಲಿರುವ ದೇವಾಲಯಕ್ಕೆ ಕುಂಭಗಳೊಂದಿಗೆ ತೆರಳಲಿದ್ದಾರೆ.ಬಳಿಕ ಮಂಗಲವಾದ್ಯಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ವಿವಿಧ ದೇವರುಗಳ ಉತ್ಸವದೊಂದಿಗೆ ಮೂಲಸ್ಥಾನ ದೇವಾಲಯಕ್ಕೆ ದೇವರುಗಳನ್ನು ಕರೆತರಲಾಗುವುದು. ದೇವಾಲಯದ ಮುಂಭಾಗದಲ್ಲಿ ಸಿದ್ಧಪಡಿಸಿರುವ ಪುಷ್ಪಾಲಂಕೃತ ವೇದಿಕೆಯಲ್ಲಿ ಎಲ್ಲಾ ದೇವರುಗಳನ್ನು ಪ್ರತಿಷ್ಠಾಪಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಆ.17ರಂದು ದೇವಾಲಯದ ಮುಂಭಾಗದಲ್ಲಿ ಪುರೋಹಿತರ ತಂಡದಿಂದ ಹವನ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಕೆ.ಬಿದರೆ ದೊಡ್ಡಮಟ್ಟದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿಯವರು ನೂತನ ಶಿಖರಕ್ಕೆ ಕಳಸಾರೋಹಣ ನೆರವೇರಿಸಲಿದ್ದು, ನೂರಾರು ಭಕ್ತರ ಜಯಘೋಷದೊಂದಿಗೆ ಕಳಸವನ್ನು ಗೋಪುರದ ಮೇಲೆ ಪ್ರತಿಷ್ಠಾಪಿಸಲಾಗುವುದು.

ಈ ಸಂದರ್ಭದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಹಾಗೂ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿಯವರು ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಕೋಡಿಮಠದ ಏಜೆಂಟ್ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಭಕ್ತರು ಭಾಗವಹಿಸಲಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *