ಹಾಸನ: ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ (RAWEP) ಅಂಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಮಂಡ್ಯ, ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ಬಿ.ಎಸ್‌ಸಿ. (ಕೃಷಿ) ಏಳನೇ ಸೆಮಿಸ್ಟರ್ ವಿದ್ಯಾರ್ಥಿಗಳು ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ (MCF), ಹಾಸನ ಅವರ ಸಹಯೋಗದಲ್ಲಿ ಮಣ್ಣು ಮಾದರಿ ಸಂಗ್ರಹಣೆ ಮತ್ತು ಮಣ್ಣಿನ ಪರೀಕ್ಷೆ ಕುರಿತು ವಿಧಾನ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದರು.

ಕಾರ್ಯಕ್ರಮದ ಉದ್ದೇಶ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ವಿಧಾನ ಹಾಗೂ ಮಣ್ಣಿನ ಪರೀಕ್ಷೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಾಗಿತ್ತು.

ಕಾರ್ಯಕ್ರಮದಲ್ಲಿ ಎಂಸಿಎಫ್‌ನ ತಾಂತ್ರಿಕ ತಜ್ಞರಾದ ಶ್ರೀ. ವಿಕ್ರಮ್ ಹಾಗು ಶ್ರೀ. ಉತ್ತಮ್ ಕೃಷಿ ಜಮೀನಿನಿಂದ ಪ್ರತಿನಿಧಿಸುವ ಮಣ್ಣಿನ ಮಾದರಿಯನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ವಿದ್ಯಾರ್ಥಿಗಳ ಸಹಾಯದಿಂದ ಪ್ರಾಯೋಗಿಕವಾಗಿ ಪ್ರದರ್ಶಿಸಿದರು.

ಮಣ್ಣಿನ ಮಾದರಿ ಸಂಗ್ರಹಿಸುವ ಸ್ಥಳದ ಆಯ್ಕೆ, ಸರಿಯಾದ ಆಳದಲ್ಲಿ ಮಾದರಿ ತೆಗೆದುಕೊಳ್ಳುವುದು, ಗೊಬ್ಬರ ಅಥವಾ ರಾಸಾಯನಿಕಗಳಿಂದ ಪ್ರಭಾವಿತ ಸ್ಥಳಗಳನ್ನು ತಪ್ಪಿಸುವುದು, ವಿವಿಧ ಸ್ಥಳಗಳಿಂದ ಪಡೆದ ಮಣ್ಣನ್ನು ಚೆನ್ನಾಗಿ ಮಿಶ್ರಣ ಮಾಡಿ ಪ್ರತಿನಿಧಿ ಮಾದರಿಯನ್ನು ತಯಾರಿಸುವುದು ಹಾಗೂ ಸರಿಯಾದ ರೀತಿಯಲ್ಲಿ ಲೇಬಲ್ ಅಳವಡಿಸಿ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸುವ ವಿಧಾನಗಳನ್ನು ವಿವರಿಸಿದರು. ಹಾಗು ಅವರ ಸಂಸ್ಥೆಯ ವತಿಯಿಂದ 100 ಮಣ್ಣಿನ ಮಾದರಿಗಳನ್ನು ಉಚಿತವಾಗಿ ಪರೀಕ್ಷಿಸುವ ಭರವಸೆಯನ್ನು ಕೊಟ್ಟರು.

ಮಣ್ಣಿನ ಪರೀಕ್ಷೆಯ ಮೂಲಕ ಮಣ್ಣಿನ ಫಲವತ್ತತೆ, ಮಣ್ಣಿನ pH, ಸಾವಯವ ಇಂಗಾಲದ ಪ್ರಮಾಣ ಹಾಗೂ ಪ್ರಮುಖ ಮತ್ತು ಸೂಕ್ಷ್ಮ ಪೋಷಕಾಂಶಗಳ ಲಭ್ಯತೆಯನ್ನು ತಿಳಿದುಕೊಳ್ಳಬಹುದೆಂದು ವಿವರಿಸಿದರು.

ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಗೊಬ್ಬರಗಳನ್ನು ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಪೋಷಕಾಂಶಗಳ ಸಮರ್ಪಕ ಬಳಕೆ, ಉತ್ತಮ ಇಳುವರಿ ಹಾಗೂ ಮಣ್ಣಿನ ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಾಧ್ಯವೆಂದು ತಿಳಿಸಿದರು.ರಾವೆಪ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರೈತರೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರು ಹಾಗೂ ಮಣ್ಣಿನ ಪರೀಕ್ಷೆ ಆಧಾರಿತ ಗೊಬ್ಬರ ನಿರ್ವಹಣೆಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ರೈತರು ಕಾರ್ಯಕ್ರಮವನ್ನು ಮೆಚ್ಚಿ, ವೈಜ್ಞಾನಿಕ ವಿಧಾನದಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ಮಣ್ಣಿನ ಪರೀಕ್ಷೆಯನ್ನು ತಮ್ಮ ಜಮೀನುಗಳಲ್ಲಿ ಅನುಸರಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದ ಅಂತ್ಯದಲ್ಲಿ ವಂದನಾರ್ಪಣೆ ಸಲ್ಲಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *