ಬೇಲೂರು : ತಾಲೂಕಿನ ಅರೇಹಳ್ಳಿ ಪಟ್ಟಣದ ಮೇಲನಹಳ್ಳಿ ಬೀದಿಯ ನಿವಾಸಿಗಳಾಗಿದ್ದ ದಿವಂಗತ ಸೈಯ್ಯದ್ ಫಿರ್ ಅವರ ಪುತ್ರ ಸೈಯ್ಯದ್ ರಿಯಾಜ್ ಪಾಷಾ ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಡಾ. ಪ್ರಕಾಶ್ ಎಸ್.ಆರ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “Cultural Adjustment Among the Migrant Labourers: A Sociological Study” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಪ್ರಸ್ತುತ ಸೈಯ್ಯದ್ ರಿಯಾಜ್ ಪಾಷಾ ಅವರು ತುಮಕೂರು ಜಿಲ್ಲೆಯ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾಕ್ಟರೇಟ್ ಪದವಿ ಲಭಿಸಿದ ಸಂತಸವನ್ನು ಹಂಚಿಕೊಂಡ ಅವರು, “ನಾನು ಮೈಸೂರಿನಲ್ಲಿ ನನ್ನ ಸಂಶೋಧನೆಯನ್ನು ಆರಂಭಿಸಿದ್ದೆ. ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಕೂಲಿ ಕಾರ್ಮಿಕರು ಇಲ್ಲಿನ ಸಂಸ್ಕೃತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಅಧ್ಯಯನ ಮಾಡಬೇಕೆಂಬ ಉದ್ದೇಶ ಹೊಂದಿದ್ದೆ. ಈ ವೇಳೆ ಭಾಷೆಯ ಸಮಸ್ಯೆಯಿಂದ ಅವರೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗಿತ್ತು. ಆದರೂ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ನಡೆಸಿದ ಸಂಶೋಧನೆಗೆ ಇದೀಗ ಫಲ ಸಿಕ್ಕಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ನಮ್ಮೂರಿನ ಯುವಕರು ಎಂದಿಗೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಎಂತಹ ಕಷ್ಟ ಬಂದರೂ ಯಾವುದಕ್ಕೂ ಕುಗ್ಗದೆ, ಜಗ್ಗದೆ ತಾವು ಅಂದುಕೊಂಡಿದ್ದನ್ನು ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು” ಎಂದು ಅವರು ಯುವಕರಿಗೆ ಕರೆ ನೀಡಿದರು.

ತಮ್ಮ ಸಂಶೋಧನೆಯನ್ನು ಮಂಡಿಸುವ ಸಂದರ್ಭದಲ್ಲಿ ಮೌಖಿಕ ಪರೀಕ್ಷೆಯ ಬಾಹ್ಯ ಪರೀಕ್ಷಕರಾಗಿ ಹಾಗೂ ಡಾಕ್ಟರಲ್ ಸಮಿತಿಯ ಅಧ್ಯಕ್ಷರಾಗಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಶೌಕತ್ ಅಜೀಂ ಕಾರ್ಯನಿರ್ವಹಿಸಿದ್ದರು.

ಪಿಎಚ್‌ಡಿ ಪದವಿ ಪಡೆಯಲು ಸಹಕರಿಸಿದ ಮಾರ್ಗದರ್ಶಕರು, ಸಹೋದ್ಯೋಗಿಗಳು, ಅರೇಹಳ್ಳಿ ಗ್ರಾಮಸ್ಥರು ಹಾಗೂ ಹಿತೈಷಿಗಳಿಗೆ ಸೈಯ್ಯದ್ ರಿಯಾಜ್ ಪಾಷಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *