ಸಕಲೇಶಪುರ: ಸಕಲೇಶಪುರ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಚಲನವಲನ ಮುಂದುವರಿದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಕಾಮನಹಳ್ಳಿ ಗ್ರಾಮದ ಐನಾರ್ ತೋಟಕ್ಕೆ ಭೇಟಿ ನೀಡಿ ತೋಟದ ಮಾಲೀಕರು ಹಾಗೂ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸೂಚನೆಗಳನ್ನು ನೀಡಿದರು.

ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಯಸಳೂರು ಗಸ್ತು ಅರಣ್ಯ ಪಾಲಕರು ಹಾಗೂ ಯಸಳೂರು ಮತ್ತು ಸಕಲೇಶಪುರ ಆರ್‌ಆರ್‌ಟಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳ ಚಲನವಲನವನ್ನು ಪರಿಶೀಲಿಸಿದರು.

ತೋಟದಲ್ಲಿ ಕಾಡಾನೆಗಳ ಇರುವಿಕೆ ಕಂಡುಬಂದ ಹಿನ್ನೆಲೆಯಲ್ಲಿ ತೋಟದ ಮಾಲೀಕರಿಗೆ ಹಾಗೂ ಅಸ್ಸಾಂ ಮೂಲದ ಕೂಲಿ ಕಾರ್ಮಿಕರಿಗೆ ಕಾಡಾನೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಮುಂಜಾಗ್ರತಾ ಕ್ರಮವಾಗಿ ಈ ದಿನ ತೋಟದಲ್ಲಿ ಯಾವುದೇ ಕೆಲಸ ಮಾಡದಂತೆ ಕಾರ್ಮಿಕರನ್ನು ವಾಪಸ್ ಕಳುಹಿಸಲಾಯಿತು. ಕಾಡಾನೆಗಳು ಯಾವ ಭಾಗದಲ್ಲಿ ಸಂಚರಿಸುತ್ತಿವೆ, ಅವುಗಳ ಚಲನವಲನ ಹೇಗಿದೆ ಎಂಬುದರ ಕುರಿತು ಸಿಬ್ಬಂದಿ ಮಾಹಿತಿ ನೀಡಿದರು.

ವಿಶೇಷವಾಗಿ ಬೆಳಗಿನ ಜಾವ ತೋಟದ ಕೆಲಸಕ್ಕೆ ತೆರಳುವ ಮುನ್ನ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಾಡಾನೆಗಳ ಚಲನವಲನದ ಕುರಿತು ಮಾಹಿತಿ ಪಡೆದುಕೊಂಡ ನಂತರವೇ ತೋಟಕ್ಕೆ ತೆರಳಬೇಕು ಎಂದು ಕಾರ್ಮಿಕರು ಹಾಗೂ ತೋಟದ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಕಾಡಾನೆಗಳು ಇರುವ ಸಂದರ್ಭದಲ್ಲಿ ಒಂಟಿಯಾಗಿ ತೋಟಗಳಿಗೆ ತೆರಳುವುದು, ಕಾಡಾನೆಗಳನ್ನು ಹಿಂಬಾಲಿಸುವುದು ಅಥವಾ ಅವುಗಳನ್ನು ಓಡಿಸಲು ಪ್ರಯತ್ನಿಸುವುದು ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಯ ಮುಂಜಾಗ್ರತಾ ಸೂಚನೆಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *