ಅರಸೀಕೆರೆ: ಮಾನವನ ಬದುಕು ಎಷ್ಟು ಶ್ರೇಷ್ಠವಾಗಿರುತ್ತದೆಯೋ ಅಷ್ಟೇ ಕನಿಷ್ಠವೂ ಆಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ ಬದುಕನ್ನು ತೊರೆದು ಶ್ರೇಷ್ಠ ಬದುಕಿನತ್ತ ಸಾಗಬೇಕು ಎಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ರಾಂಪುರ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಆರ್.ಎನ್. ಶೇಖರಪ್ಪ ಅವರ ತಾಯಿ ಶ್ರೀಮತಿ ರಾಮಕ್ಕ ಅವರ ಪುಣ್ಯಸ್ಮರಣೆ ಹಾಗೂ ಶರಣ ಸಮ್ಮೇಳನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗುರುವಾರ ಆಶೀರ್ವಚನ ನೀಡಿದರು.

ಬಸವಾದಿ ಶಿವಶರಣರು ಹಾಗೂ ಹಿರಿಯ ಗುರುಗಳ ಆಶಯದಂತೆ ಪ್ರತಿಯೊಬ್ಬರೂ ಶ್ರೇಷ್ಠ ಬದುಕನ್ನು ಸಾಗಿಸಬೇಕು. ಮನುಷ್ಯನು ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ಈ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ನೀಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಭಕ್ತರು ಶ್ರೀಮಂತರಾದಾಗ ಅಹಂಕಾರ ಬೆಳೆಸಿಕೊಳ್ಳದೆ ಸತ್ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಸಂಪತ್ತಿನ ಸದ್ಬಳಕೆ ಮಾಡಬೇಕು. ಸಮಾಜಕ್ಕೆ ಧಾರೆಯೆರೆಯುವ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವಾನಂದ ಸ್ವಾಮೀಜಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಜನತೆ ಆಧುನಿಕ ಜೀವನಶೈಲಿಗೆ ಮಾರುಹೋಗಿ ಮೌಲ್ಯಗಳು ಹಾಗೂ ಹಿರಿಯರ ಸಿದ್ಧಾಂತಗಳನ್ನು ಗಾಳಿಗೆ ತೂರಿ ನಡೆಯುತ್ತಿರುವುದರಿಂದ ಸಮಾಜ ದಿಕ್ಕುತಪ್ಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಮಾತನಾಡುವ ಕಲೆಯ ಜೊತೆಗೆ ಕೇಳಿಸಿಕೊಳ್ಳುವ ಗುಣವೂ ಬೆಳೆಯಬೇಕು. ಅಂತರಂಗದ ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಅಹಿಂಸೆ, ಸಹಕಾರ ಮತ್ತು ಪರೋಪಕಾರದಂತಹ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕತೆ ಹೊಂದುತ್ತದೆ ಎಂದು ಕಿವಿಮಾತು ಹೇಳಿದರು.

ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಡಿ.ಎಂ. ಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಹಾಗೂ ಉಪನ್ಯಾಸಕ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಧು ಲಿಂಗಾಯಿತ ಸಮಾಜದ ಮುಖಂಡ ಅಣ್ಣಾಯಕನಹಳ್ಳಿ ವಿಜಯಕುಮಾರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಹೊಸೂರು ಗಂಗಾಧರ್ ಉಪಸ್ಥಿತರಿದ್ದರು. ತಾಲೂಕು ಸಾಧು ಲಿಂಗಾಯಿತ ವೀರಶೈವ ಸಮಾಜದ ಮುಖಂಡ ಎನ್.ಜಿ. ಮರಳುಸಿದ್ದಸ್ವಾಮಿ ಹಾಗೂ ನಾಗಸಮುದ್ರ ವಾಸ್ತವಿಕವಾಗಿ ಮಾತನಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *