ಚಿಕ್ಕಮತಿಘಟ್ಟ: ರೈತರ ಜಾನುವಾರುಗಳ ಆರೋಗ್ಯವನ್ನು ಕಾಪಾಡುವ ಹಾಗೂ ಅವುಗಳ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಡ್ಯ, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ, ಮತ್ತು ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಸನ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ, ಕೃ.ವಿ.ವಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಆಯೋಜಿಸಲಾದ ಪಶುವೈದ್ಯಕೀಯ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ 300ಕ್ಕೂ ಅಧಿಕ ಜಾನುವಾರುಗಳಿಗೆ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿದ್ದು, 150ಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆದರು.ಶಿಬಿರದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನದಿಂದ ಆಗಮಿಸಿದ್ದ ಡಾ.ಎಂ.ಶಿವಕುಮಾರ್, ಪ್ರಾಧ್ಯಾಪಕರು ಹಾಗು ಮುಖ್ಯಸ್ಥರು, ಡಾ.ಬಿ.ಪಿ ರವಿಕುಮಾರ್,ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಡಾ.ಪಿ.ರವಿಕುಮಾರ್ ಸಹ ಪ್ರಾಧ್ಯಾಪಕರು ಮತ್ತು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಕಾಲೇಜಿನ ಡಾ.ಶಶಿಕಲಾ ಎಸ್.ಜಿ, RAWEP ಸಂಯೋಜಕರು, ಡಾ.ಗುರುಮೂರ್ತಿ.ಹೆಚ್,ಸಹ ಸಂಯೋಜಕರು(ಚಿಕ್ಕಮತಿಘಟ್ಟ) ಡಾ.ಚಂದನ.ಎಲ್, ಸಹ ಸಂಯೋಜಕರು (ದೊಡ್ಡಮತಿಘಟ್ಟ) ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಹಾಗು ಅಂತಿಮ ವರ್ಷದ ಸ್ನಾತಕ ವಿದ್ಯಾರ್ಥಿಗಳು ಜಾನುವಾರುಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿರುವ ವಿವಿಧ ಲಸಿಕೆಗಳನ್ನು ನೀಡಿದರು.

ಜಾನುವಾರುಗಳಲ್ಲಿ ಕಂಡುಬಂದ ಉಣ್ಣಿ, ಹೇನು ಹಾಗೂ ಇತರೆ ಬಾಹ್ಯ ಪರೋಪಜೀವಿಗಳ ಬಾಧೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಆಂತರಿಕ ಪರೋಪಜೀವಿಗಳು ಮತ್ತು ಜಂತುಬಾಧೆ ಕಂಡುಬಂದ ಜಾನುವಾರುಗಳಿಗೆ ಸೂಕ್ತ ಜಂತುನಾಶಕ ಚಿಕಿತ್ಸೆಯನ್ನು ಒದಗಿಸಲಾಯಿತು.

ಜಾನುವಾರುಗಳ ಸಂತಾನೋತ್ಪತ್ತಿ ಆರೋಗ್ಯಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಅಗತ್ಯವಿರುವ ಹಸುಗಳು ಮತ್ತು ಇತರೆ ಜಾನುವಾರುಗಳಲ್ಲಿ ಗರ್ಭಧಾರಣೆ (Pregnancy) ಪರೀಕ್ಷೆಯನ್ನು ನಡೆಸಲಾಯಿತು. ಗರ್ಭಿಣಿ ಜಾನುವಾರುಗಳ ಆರೈಕೆ, ಪೌಷ್ಟಿಕಾಂಶ, ಲಸಿಕಾಕರಣ ಮತ್ತು ಪ್ರಸವಪೂರ್ವ ನಿರ್ವಹಣೆಯ ಕುರಿತು ರೈತರಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು.

ಶಿಬಿರದ ಸಂದರ್ಭದಲ್ಲಿ ರೈತರು ತಮ್ಮ ಜಾನುವಾರುಗಳ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪಶುವೈದ್ಯಕೀಯ ತಜ್ಞರೊಂದಿಗೆ ನೇರವಾಗಿ ಚರ್ಚಿಸಿ, ಸೂಕ್ತ ಚಿಕಿತ್ಸೆ ಹಾಗೂ ನಿರ್ವಹಣಾ ಸಲಹೆಗಳನ್ನು ಪಡೆಯಲು ಅವಕಾಶ ದೊರೆಯಿತು.

300ಕ್ಕೂ ಅಧಿಕ ಜಾನುವಾರುಗಳಿಗೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆ ನೀಡಿ, 150ಕ್ಕೂ ಹೆಚ್ಚು ರೈತರಿಗೆ ಪ್ರಯೋಜನ ಒದಗಿಸಿದ ಈ ಶಿಬಿರವು ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಆರೋಗ್ಯ ಮತ್ತು ರೈತರ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *