
ಸಕಲೇಶಪುರ: ದೀಪಾವಳಿ ಹಬ್ಬದ ಪ್ರಯುಕ್ತ ಸಕಲೇಶಪುರದ ನಿವೃತ್ತ ಶಿಕ್ಷಕರಾದ ಶಮೋದ ಶೆಟ್ಟಿ ಮತ್ತು ರಘುನಾಥ್ ಶೆಟ್ಟಿ ಅವರ ಕುಟುಂಬದವರು ಪೌರ ಕಾರ್ಮಿಕರು ಹಾಗೂ ನೀರು ಸರಬರಾಜು ಕಾರ್ಮಿಕರಿಗೆ ಉಡುಗೊರೆಯಾಗಿ ಬಟ್ಟೆಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಕಲೇಶಪುರ ನಗರವನ್ನು ಸ್ವಚ್ಛವಾಗಿಡಲು ಪ್ರತಿದಿನ ಶ್ರಮಿಸುವ ಪೌರ ಕಾರ್ಮಿಕರು ಹಾಗೂ ನಗರದ ಮನೆಮನೆಗೆ ಕುಡಿಯುವ ನೀರನ್ನು ತಲುಪಿಸುವ ನೀರು ಸರಬರಾಜು ಕಾರ್ಮಿಕರ ಸೇವೆಯನ್ನು ಗುರುತಿಸಿ ಈ ಉಡುಗೊರೆಗಳನ್ನು ನೀಡಲಾಗಿದೆ.
ವಿಶೇಷವಾಗಿ 15 ಮಹಿಳಾ ಪೌರ ಕಾರ್ಮಿಕರಿಗೆ ಸೀರೆಗಳನ್ನು ವಿತರಿಸಲಾಗಿದ್ದು, ಇತರ ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ಸಿಬ್ಬಂದಿಗೂ ಬಟ್ಟೆಗಳನ್ನು ನೀಡಲಾಗಿದೆ.
ಬಾಳಗದ್ದೆ ನಿವಾಸಿಗಳಾದ ಶಮೋದ ಶೆಟ್ಟಿ ಮತ್ತು ರಘುನಾಥ್ ಶೆಟ್ಟಿ ಅವರ ಕುಟುಂಬದವರು ಯಾವುದೇ ಪ್ರಚಾರದ ಉದ್ದೇಶವಿಲ್ಲದೆ, ಜಾತಿ-ಮತದ ಭೇದವಿಲ್ಲದೆ ಕಾರ್ಮಿಕರನ್ನು ಆತ್ಮೀಯವಾಗಿ ಗೌರವಿಸಿ ದೀಪಾವಳಿಯ ಉಡುಗೊರೆಗಳನ್ನು ನೀಡಿರುವುದು ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಕಾರ್ಮಿಕರೊಂದಿಗೆ ಆತ್ಮೀಯವಾಗಿ ಸಮಯ ಕಳೆದ ಕುಟುಂಬದವರು, ನಗರದ ಸ್ವಚ್ಛತೆಯನ್ನು ಕಾಪಾಡುವ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷವಾಗಿ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಿ ಹಬ್ಬದ ಸಂತೋಷವನ್ನು ಹಂಚಿಕೊಂಡರು.
ಈ ಮಾನವೀಯ ಕಾರ್ಯವನ್ನು ಶ್ಲಾಘಿಸಿದ ಹಿಂದೂ ಮುಖಂಡ ರಘು ಸಕಲೇಶಪುರ ಅವರು, “ಇಂದಿನ ದಿನಗಳಲ್ಲಿ ಇತರರ ಕಷ್ಟವನ್ನು ಅರಿತು, ಸಮಾಜದ ಸ್ವಚ್ಛತೆ ಮತ್ತು ಜನರ ಆರೋಗ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು. ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಇಂತಹ ಕಾರ್ಯಕ್ಕೆ ಮುಂದಾಗಿರುವ ಶಮೋದ ಶೆಟ್ಟಿ ಮತ್ತು ರಘುನಾಥ್ ಶೆಟ್ಟಿ ಅವರ ಕುಟುಂಬಕ್ಕೆ ಭಗವಂತ ಆಯುರಾರೋಗ್ಯ, ಐಶ್ವರ್ಯ ಹಾಗೂ ಸುಖ-ಸಮೃದ್ಧಿಯನ್ನು ಕರುಣಿಸಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ವಿಭಾಗ ಸಂಚಾಲಕ ಕೌಶಿಕ್ ಎಚ್.ಎಂ., ಲೋಕೇಶ್ ಆಟೋ ದುಷ್ಯಂತ್ ಗೌಡ, ಬಿಜೆಪಿ ಮುಖಂಡರು, ಹಿಂದೂ ಹಿತರಕ್ಷಣಾ ವೇದಿಕೆಯ ತಾಲ್ಲೂಕು ಸಂಚಾಲಕ ಶಿವುಜಿಪ್ಪಿ ಬೋರೇಗೌಡ, ಹಾನಬಾಳು ಹೋಬಳಿ ಸಂಚಾಲಕ ರವಿ ಲೋಹಿತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸಕಲೇಶಪುರದ ಕಸ ವಿಲೇವಾರಿ ಆಟೋ ಚಾಲಕರು, ಟ್ರ್ಯಾಕ್ಟರ್ ಚಾಲಕರು ಹಾಗೂ ಇತರ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷದಿಂದ ಉಡುಗೊರೆಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಕಾರ್ಮಿಕರಿಗೂ ಸೀರೆ ಮತ್ತು ಬಟ್ಟೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಸಣ್ಣ ಕಾರ್ಯವನ್ನು ಸಕಲೇಶಪುರದ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜಿಸಲಾಗಿತ್ತು
ಶಮೋದ ಶೆಟ್ಟಿ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕಿ ಆಗಿದ್ದರಿಂದ ಅಲ್ಲೇ ಪೌರ ಕಾರ್ಮಿಕರಿಗೆ ದೀಪಾವಳಿ ಉಡುಗರೇ ಕೊಡಬೇಕು ಎಂದು ಅವರ ಆಸೆಯಾಗಿತ್ತು ಪ್ರಚಾರಕ್ಕಾಗಿ ಅಲ್ಲ, ಸಮಾಜಕ್ಕೆ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ಕೆ ಸಕಲೇಶಪುರದ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮಾಜದ ಸ್ವಚ್ಛತೆಗಾಗಿ ಶ್ರಮಿಸುವ ಕಾರ್ಮಿಕರನ್ನು ಗೌರವಿಸುವ ಇಂತಹ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.



