
ಬೇಲೂರು : ಕಾಡಾನೆಗಳ ನಿರಂತರ ದಾಳಿಯಿಂದ ಚೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗೋಡು ಗ್ರಾಮದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಗದ್ದೆಗಳಿಗೆ ರಾತ್ರಿ ವೇಳೆ ನುಗ್ಗುವ ಕಾಡಾನೆಗಳು ಬೆಳೆಗಳನ್ನು ತುಳಿದು ನಾಶಪಡಿಸುತ್ತಿದ್ದು, ರೈತರ ಬದುಕು ದುಸ್ತರವಾಗಿದೆ.
👨🌾 50 ವರ್ಷಗಳಿಂದ ಭತ್ತದ ಕೃಷಿ, ಈಗ ಸಂಕಷ್ಟ!ಕೋಗೋಡು ಗ್ರಾಮದ ರೈತ ಮಂಜುನಾಥ್ ಅವರು ಸುಮಾರು 50 ವರ್ಷಗಳಿಂದ 7 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ಕಾಲದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 300 ಎಕರೆಗೂ ಹೆಚ್ಚು ಭತ್ತ ಬೆಳೆಯಲಾಗುತ್ತಿತ್ತು. ಆದರೆ ಕಾಡಾನೆಗಳ ನಿರಂತರ ಹಾವಳಿಯಿಂದ ಬಹುತೇಕ ರೈತರು ಗದ್ದೆ ಕೃಷಿಯನ್ನೇ ಕೈಬಿಟ್ಟಿದ್ದಾರೆ.
💰 ಲಕ್ಷಾಂತರ ವೆಚ್ಚ – ಸಾವಿರಗಳಲ್ಲಿ ಪರಿಹಾರ!ನಾಟಿಯಿಂದ ಕಟಾವಿನವರೆಗೆ 30–40 ಕೂಲಿ ಕಾರ್ಮಿಕರ ಅಗತ್ಯವಿದ್ದು, ದಿನಕ್ಕೆ ₹500–₹600 ಕೂಲಿ ನೀಡಬೇಕಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕಾಡಾನೆಗಳಿಂದ ನಾಶವಾದರೆ, ಸರ್ಕಾರ ನೀಡುವ ₹2,000–₹4,000 ಪರಿಹಾರ ಯಾವುದಕ್ಕೂ ಸಾಲದು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಲ್ಲದೆ, ಬೆಳೆ ಹಾನಿಯಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಹಾಗೂ ಪರಿಹಾರ ವಿಳಂಬವಾಗುತ್ತಿರುವುದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಸಂಪೂರ್ಣ ನಿಂತುಹೋಗುವ ಆತಂಕವಿದೆ. ಭತ್ತದ ಕೃಷಿ ನಾಶವಾದರೆ ಮುಂದಿನ ಪೀಳಿಗೆ ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ
👉 ಸರ್ಕಾರ ಹಾಗೂ ಅರಣ್ಯ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ನಷ್ಟಕ್ಕೆ ವೈಜ್ಞಾನಿಕ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಕೋಗೋಡು ರೈತರು ಒತ್ತಾಯಿಸಿದ್ದಾರೆ.
