
ಕೊಡಗು ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಆಚರಿಸಲಾಗುವ ಮತ್ತೊಂದು ಪ್ರಮುಖ ಹಬ್ಬ ಕೈಲ್ ಮುಹೂರ್ತ- ‘ಕೈಲ್ ಪೊಳ್ದ್ ‘.
ಮುಂಗಾರು ಪ್ರವೇಶಿಸುತ್ತಿದ್ದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇಲ್ಲಿನ ಜನರು ಅದು ಮುಗಿಯುತ್ತಿದ್ದಂತೆ ಈ ಹಬ್ಬವನ್ನು ಆಚರಿಸುತ್ತಾರೆ.ಕೃಷಿ ಚಟುವವಟಿಕೆಗಳಲ್ಲಿ ಬಳಕೆ ಮಾಡುವಂತಹ ಪರಿಕರಗಳಿಗೆ ಪೂಜೆ ಸಲ್ಲಿಸಿ, ಗೌರವಯುತವಾಗಿ ಅವುಗಳನ್ನು ಸ್ವಸ್ಥಾನದಲ್ಲಿ ಇರಿಸುವುದು.
ಇದುವರೆಗೂ ಮನೆಯೊಳಗಿದ್ದ ಕೋವಿ ಮೊದಲಾದ ಆಯುಧಗಳನ್ನು ಹೊರತೆಗೆದು ಪೂಜೆ ಸಲ್ಲಿಸುವುದೇ ‘ಕೈಲ್ ಪೊಳ್ದ್ ‘.ಜಿಲ್ಲೆಯ 3 ಪ್ರಮುಖ ಹಬ್ಬಗಳಲ್ಲಿ ಈ ಕೈಲ್ ಮುಹೂರ್ತ ಹಬ್ಬವನ್ನು ಒಂದೆಂದು ಪರಿಗಣಿಸಲಾಗಿದೆ. ಕಾವೇರಿ ತುಲಾ ಸಂಕ್ರಮಣ ಹಾಗೂ ಹುತ್ತರಿ ಉಳಿದೆರಡು ಪ್ರಮುಖ ಹಬ್ಬಗಳು. ಕೈಲ್ ಮುಹೂರ್ತ ಹಬ್ಬದ ಆಚರಣೆಯು ಏಕರೂಪತೆಯಿಂದ ಇರದೇ ಪ್ರಾದೇಶಿಕವಾದ ಭಿನ್ನತೆಯಿಂದ ಕೂಡಿರುವುದು ವಿಶೇಷ.
ನಾಲ್ಕುನಾಡು, ಕಡಿಯತ್ತ ನಾಡು, ಬೆಂಗ್ ನಾಡು ಹೀಗೆ ಒಂದೊಂದು ಕಡೆಯೂ ಒಂದೊಂದು ದಿನ ಹಬ್ಬ ಆಚರಿಸಲಾಗುತ್ತದೆ.ನಾಲ್ಕುನಾಡು ವ್ಯಾಪ್ತಿಯಲ್ಲಿ ಆಗಸ್ಟ್ 28ರಂದು ಹಬ್ಬವನ್ನು ಆಚರಿಸುತ್ತಾರೆ. ಇನ್ನಿತರ ಕೆಲವು ಕಡೆ ಸೆಪ್ಟಂಬರ್ 3 ರಂದು ಆಚರಿಸಲಾಗುತ್ತದೆ.
ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ ಇದನ್ನು ಕೈಲ್ ಪೊಳ್ದ್ ಎಂದೂ ಕರೆಯುತ್ತಾರೆ.ಈ ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ, ಕತ್ತಿ ಹಾಗೂ ಮತ್ತಿತರ ಆಯುಧಗಳನ್ನು ಬಳಸುತ್ತಿದ್ದರು. ಆದರೆ, ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೋಂಬರೆಯಲ್ಲಿ ಇಡುತ್ತಾರೆ.
ಕೃಷಿ ಕಾರ್ಯ ಮುಗಿದ ನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರಗೆ ತೆಗೆಯಲಾಗುತ್ತದೆ. ಈ ಆಯುಧಗಳನ್ನು ಕನ್ನಿಕೋಂಬರೆಯಿಂದ ಹೊರ ತೆಗೆದು ಭಕ್ತಿಯಿಂದ ಪೂಜಿಸಲಾಗುತ್ತದೆ. ಕೋವಿಯನ್ನು ಪೂಜಿಸಲು ತೋಕುಪೂ (ಕೋವಿ ಹೂ)ವನ್ನು ಬಳಸುತ್ತಾರೆ. ಇದು ಕಾಡುಗಳಲ್ಲಿ ಬೆಳೆಯುವ ವರ್ಣ ರಂಜಿತವಾಗಿ ಬೆಳೆಯುವ ಗೌರಿ ಹೂ ಎಂದೂ ಹೆಸರಾಗಿದೆ.
ಕೈಲ್ ಮುಹೂರ್ತದ ನಂತರ ಕತ್ತಿ, ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ಬಳಕೆಯಾಗಿದ್ದ ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿರಾಮ. ಅಂತೆಯೇ ಈ ಎಲ್ಲಾ ಉಪಕರಣಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ ಗಂಧ ಹಚ್ಚಿ ಅಲಂಕರಿಸಲಾಗುತ್ತದೆ.
ಅಕ್ಕಿ ಬೆಲ್ಲದಿಂದ ಮಾಡಿದ ಪಾಯಸವನ್ನು ಅವುಗಳಿಗೆ ತಿನ್ನಿಸಲಾಗುತ್ತದೆ.ಗದ್ದೆ ಕೆಲಸಕ್ಕೆ ಬಳಸಿದ ಸಲಕರಣೆಗಳನ್ನು ತೊಳೆದು ಪೂಜೆ ಸಲ್ಲಿಸಿ ಸುರಕ್ಷಿತವಾಗಿರಿಸಿದರೆ ಅವು ಬಳಕೆಯಾಗುವುದು ಮುಂದಿನ ವರ್ಷಕ್ಕೆ. ಕಡಂಬಿಟ್ಟು ಹಾಗೂ ಹಂದಿ ಮಾಂಸದ ಊಟ ಕೈಲ್ ಮುಹೂರ್ತ ಹಬ್ಬದ ವಿಶೇಷ. ಬಳಿಕ ಎಲ್ಲರೂ ಮಂದ್‌ನಲ್ಲಿ ಸೇರುತ್ತಾರೆ. ಅಲ್ಲಿ ಕೋವಿಯ ಮೂಲಕ ಗುಂಡು ಹಾರಿಸಿ ಹಬ್ಬದ ಆಚರಣೆಯನ್ನು ಸಾರುತ್ತಾರೆ.
ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯ ಪ್ರದರ್ಶನದ ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯಲಾಗುತ್ತದೆ. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಬೇಟೆಯಾಡುವ ಸಮಯವನ್ನು ನಿರ್ಧರಿಸುತ್ತಾರೆ. ಇದು ಹಿಂದಿನಿಂದ ಬೆಳೆದು ಬಂದ ಪದ್ಧತಿ. ಆದರೆ, ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಆಚರಣೆಗಳು ಮರೆಯಾಗಿವೆ.
ಗ್ರಾಮೀಣ ಕ್ರೀಡೆಗಳು ಕೈಲ್ ಮುಹೂರ್ತ ಹಬ್ಬದಲ್ಲಿ ಮನರಂಜಿಸುತ್ತವೆ ಎನ್ನುತ್ತಾರೆ ಮಕ್ಕಿ ಶಾಸ್ತಾವು ಯುವಕ ಸಂಘದ ಅಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ.


