
ಸಕಲೇಶಪುರ : ತಾಲ್ಲೂಕಿನ ಹೆತ್ತೂರಿನಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಳಲಹಳ್ಳಿ ಗ್ರಾಮ ಪಂಚಾಯಿತಿಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದ್ದು ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 12ಹಳ್ಳಿಗಳಿದ್ದು ಪ್ರಸ್ತುತ ಹೆತ್ತೂರಿನ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಒಂದುವರೆ ಸಾವಿರಕ್ಕೂ ಅಧಿಕ ಶೇರುದಾರರಿದ್ದಾರೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹೆತ್ತೂರುನಲ್ಲಿರುವ ಕೃಷಿ ಪತ್ತಿನ ಸಹಕಾರ ಬ್ಯಾಂಕಿಗೆ ಹೋಗಿ ತಮ್ಮ ವ್ಯವಹಾರಗಳನ್ನು ಮಾಡಿಕೊಂಡು ಬರಲು ಕಷ್ಟವಾಗುತ್ತಿದೆ ಹಾಗಾಗಿ ವಳಲಹಳ್ಳಿ ಗ್ರಾಮ ಪಂಚಾಯಿತಿಗೆ ಒಂದು ಪ್ರತ್ಯೇಕ ಸಹಕಾರ ಸಂಘದ ಬ್ಯಾಂಕ್ ಅವಶ್ಯಕತೆ ಇದೆ ಎಂದು ಗ್ರಾಮಸ್ಥರ ಒಪ್ಪಿಗೆ ಮೇಲೆ ಸಹಿ ಮಾಡಿ ಮನವಿ ಪತ್ರವನ್ನು ಇಂದು ಸಕಲೇಶಪುರದ ಕೃಷಿ ಪತ್ತಿನ ಸಹಕಾರ ಸಂಘದ ಅಧೀಕ್ಷಕರಾದ ಕುಮಾರ್ ಅವರಿಗೆ ಕೊಡಲಾಯಿತು.
ಈ ಸಂದರ್ಭದಲ್ಲಿ ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಳಲಹಳ್ಳಿ ಸುಬ್ರಹ್ಮಣ್ಯ (ವಸಂತ್) , ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕರಡಿಗಾಲ ಕೃಷ್ಣೇಗೌಡ ,ಶ್ರೀ ಚೌಡೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರಜ್ವಲ್ ಚಿನ್ನಹಳ್ಳಿ ,ಹಾಗೂ ಕರಡಿಗಾಲ ಅರುಣ್ ಗೌಡ ಇದ್ದರು.
