ಒಬ್ಬ ರೋಗಿ ಮನೆಯಲ್ಲಿದ್ದರೆ ಅವರ ಶ್ರುಶ್ರೂಷೆ, ಪಥ್ಯೋಪಚಾರ, ಕಾಲಕಾಲಕ್ಕೆ ಔಷಧ, ತಕ್ಕಷ್ಟು ಶುಚಿತ್ವ ಎಲ್ಲವೂ ಇದ್ದರೆ ರೋಗಿಯು ಬೇಗ ಗುಣಮುಖನಾಗಿ ತನ್ನ ದೈನಂದಿನ ಕೆಲಸಗಳಲ್ಲಿ ತೊಡಗಲು ಸಹಕಾರಿ, ರೋಗಿಗೆ ಚಿಕಿತ್ಸೆ, ಔಷಧಿ ನೀಡಿ, ತಾಕತ್ತು ಬರುವ ಮೊದಲೇ ಆಹಾರವೇ ಇಲ್ಲದಂತಾದರೆ ದೇಹ ಮತ್ತಷ್ಟು ಕೃಶವಾಗಿ ನಿತ್ರಾಣವಾಗುತ್ತಲ್ಲವೇ..?

ಕಾಡಾನೆ ಭೀಮನ ಅನಾರೋಗ್ಯ, ಔಷಧೋಪಚಾರ ಮುಂತಾದ ವಿಚಾರ ಓದಿದ್ದಿರಿ, ಸಕಲೇಶಪುರ ತಾಲ್ಲೂಕು ಹೆಗ್ಗೋವೆಯ ಸ್ಥಳೀಯರು ಈ ಆನೆಯ ಹೊಟ್ಟೆ ತುಂಬಿಸುವ ವಿಚಾರವನ್ನು ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ನೋಡಿದಿರಿ , ಆದರೆ *ರಾವಣನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯೇ..?* ಎಂಬಂತೆ ಅದರ ಹೊಟ್ಟೆ ತುಂಬಿಸಲು ಕೆಲವರು ಶ್ರಮಿಸಿ ಬೈನೆ ಸೊಪ್ಪು, ಬಿದಿರು, ಬಾಳೆ ಮುಂತಾದವುಗಳನ್ನು ಸಂಗ್ರಹಿಸಿ ಕಾಡಾನೆಗೆ ಕೊಟ್ಟು, ಪ್ರತಿ ದಿನ ಇದರ ಈ ಕಾಯಕ ಮಾಡುತ್ತಿದ್ದರೆ ಅವರ ಸಂಸಾರದ ನೆಡಸುವವರು ಯಾರು …? ಹೀಗಾಗಿ ಅವರು ಕೈಬಿಟ್ಟರು.

ಕಾಡಾನೆಗೆ ಚಿಕಿತ್ಸೆ ಕೊಟ್ಟ ವೈದ್ಯರ ತಂಡ ಹಾಗೂ ಆನೆ ಕಾವಲು ಪಡೆಗೆ ಉಳಿದ ಚಿಕಿತ್ಸೆಯ ಭಾರ ಹೊರಿಸಿ ಅಲ್ಲಿಂದ ಕಾಲ್ಕಿತ್ತರು..! ಇನ್ನು ಆನೆಯ ಹೊಟ್ಟೆಯ ಪಾಡೇನು.? ಅಲ್ಲಿಲ್ಲಿ ತಿರುಗಿ ಬಿದಿರು ಬೈನೆಯ ಸೊಪ್ಪನ್ನು ನಿಧಾನಕ್ಕೆ ತಿನ್ನುತ್ತದೆ ಎನ್ನುವಷ್ಟರಲ್ಲಿ ಆ ಗ್ರಾಮದಲ್ಲಿ ಮತ್ತೊಂದು ಕೆಲಸ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಆ ಊರಿನ ಕಾಡಿನಲ್ಲಿರುವ ಬಿದಿರುಮೆಳೆ ತೆರವು ಮಾಡಲು ಜೆ ಸಿ ಬಿ ಗಳು ಅಬ್ಬರಿಸುತ್ತಿವೆ, ಇತ್ತ ರೋಗಗ್ರಸ್ತ ಭೀಮನಿಗೆ ಆಹಾರ ಇಲ್ಲ, ಇರುವಲ್ಲಿಗೆ ಹೋಗಿ ಹುಡುಕಿ ತಿನ್ನಲು ಈ ಯಂತ್ರಗಳ ಅಬ್ಬರ, ಆ ಪ್ರಾಣಿ ಎಲ್ಲಿಗೆ ಹೋಗಬೇಕು, ಏನು ತಿನ್ನಬೇಕು..? ಅರಣ್ಯ ಇಲಾಖೆ ಏನು ಮಾಡುತ್ತಿದೆ..? ಬಿದಿರು ಕೀಳುವುದನ್ನು ಸ್ಥಳೀಯರು ಪ್ರತಿಭಟಿಸಿ ಸದ್ಯಕ್ಕೆ ನಿಲ್ಲಿಸಿದ್ದಾರೆ.

ದಯಮಾಡಿ ಆನೆಯನ್ನು ಸ್ಥಳಾಂತರಿಸಿ, ಅಥವಾ ಅದಕ್ಕೆ ಪೂರ್ತಿ ಆರೋಗ್ಯ ಸರಿಯಾಗುವವರೆಗೆ ಆಹಾರ ವ್ಯವಸ್ಥೆ ಮಾಡಿ, ಈವರೆಗೆ ಗ್ರಾಮಸ್ಥರು ಕಾಪಾಡಿರುವ ಆನೆಯ ಉಸ್ತುವಾರಿಯನ್ನು ಅರಣ್ಯಾಧಿಕಾರಿ ವಹಿಸಿಕೊಳ್ಳಬೇಕೆಂದು ಗ್ರಾಮಸ್ಥರು ಕಳಕಳಿಯಿಂದ ಮನವಿ ಮಾಡುತ್ತಿದ್ದಾರೆ.

ಭೀಮನಿಗೆ ಶುಶ್ರೂಷೆ ಅಗತ್ಯವಾಗಿ ಬೇಕಿದ್ದು ಹಾಸನದಲ್ಲಿರುವ ಪಶುವೈದ್ಯರ ತಂಡವೇ ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದರೆ ಬಹಳ ಅನುಕೂಲ.ಇಲಾಖೆ ಆನೆಯ ಆಹಾರ ಔಷಧೋಪಚಾರಗಳಿಗೆ ಮತ್ತೇನೂ ಕ್ರಮ ತೆಗೆದುಕೊಂಡಿಲ್ಲದ ಕಾರಣ ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಿ ಆಹಾರ ರೂಪದಲ್ಲಿ ಬಗಿನೆ, ಜೋಳ, ಕಬ್ಬು ಮುಂತಾದುವುಗಳನ್ನು ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.. ಹೆಚ್ಚಿನ ಮಾಹಿತಿಗಾಗಿ 9686204969 ಮಿಥುನ್, ಹೆಗ್ಗೋವೆ ಅವರನ್ನು ಸಂಪರ್ಕಿಸಬಹುದು.

ಸತ್ಯ ಹರಿಹಳ್ಳಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *