ಉತ್ತರ ಆಫ್ರಿಕಾ -ಮೊರಾಕೊ : ಈವರೆಗೆ ಬಂದ ಮಾಹಿತಿಯ ಪ್ರಕಾರ ಈ ಪ್ರಬಲ ಭೂಕಂಪದಿಂದ 2012 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 2000 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆಂತರಿಕ ಸಚಿವಾಲಯ ಶನಿವಾರ ತಡರಾತ್ರಿ ತಿಳಿಸಿದೆ.

ಪ್ರವಾಸಿ ನಗರವಾದ ಮರಕೇಶ್‌ನಿಂದ ನೈಋತ್ಯಕ್ಕೆ 72 ಕಿಲೋಮೀಟರ್ ದೂರದಲ್ಲಿರುವ ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಈ ಪ್ರಾಕೃತಿಕ ವಿಕೋಪ ಉಂಟಾಗಿದೆ.

ಭೂಕಂಪದ ಕೇಂದ್ರಬಿಂದುವಾಗಿರುವ ಅಲ್-ಹೌಜ್ ಪ್ರಾಂತ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಎರಡನೇ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ತಾರೌಡಾಂಟ್ ಪ್ರಾಂತ್ಯದಲ್ಲಿ 452 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಸಮರೋಪಾಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ದಶಕಗಳ ನಂತರ ಮೊರಾಕೊದಲ್ಲಿ ಸಂಭವಿಸಿದ ಭೀಕರ ಭೂಕಂಪ ಇದು ಆಗಿರೋದ್ರಿಂದ ಸರ್ಕಾರ ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ತುರ್ತು ಸೇವೆಗಳು ಅಗತ್ಯವಾಗಿ ತಲುಪಬೇಕಾಗಿದ್ದ ದೂರದ ಪರ್ವತ ಪ್ರದೇಶದ ಹಳ್ಳಿಗಳನ್ನು ತಲುಪಲು ರಕ್ಷಣಾ ಪಡೆಗಳು ಪರದಾಡಿದರು.

ಪ್ರಬಲ ಭೂಕಂಪವು ಉತ್ತರ ಆಫ್ರಿಕಾದ ದೇಶದಲ್ಲಿ 2,000 ಕ್ಕೂ ಹೆಚ್ಚು ಜನರನ್ನು ಕೊಂದಿದ್ದರೂ, ಇದು ಅತ್ಯಂತ ಸಕ್ರಿಯ ಭೂಕಂಪನ ಪ್ರದೇಶವನ್ನು ಹೊಡೆದಿಲ್ಲ ಎಂದು ಫ್ರೆಂಚ್ ತಜ್ಞರು ಹೇಳಿದ್ದಾರೆ. ಆದರೆ ನಂತರದ ಆಘಾತಗಳನ್ನು ನಿರೀಕ್ಷಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಭೂಕಂಪಗಳು ಸಂಭವಿಸುತ್ತವೆಯೇ ಎಂಬ ಪ್ರಶ್ನೆ ಇಲ್ಲದ ದೇಶಗಳಲ್ಲಿ ಮೊರಾಕೊ ಕೂಡ ಒಂದು. ಅಗಾದಿರ್ ಭೂಕಂಪವು (1960 ರಲ್ಲಿ 5.7 ತೀವ್ರತೆ) ಇಡೀ ನಗರವನ್ನು ನಾಶಪಡಿಸಿತ್ತು. ಆಗ ಸುಮಾರು 15,000 ಜನರು ಸಾವನ್ನಪ್ಪಿದ್ದರು.

ಇತ್ತೀಚೆಗೆ ಅಲ್ ಹೋಸಿಮಾ ಭೂಕಂಪ (2004 ರಲ್ಲಿ 6.4 ತೀವ್ರತೆ) ಸಂಭವಿಸಿತ್ತು. ಇನ್ನು ಭೂಕಂಪದಿಂದ ಮನೆ ಮಠಗಳನ್ನು ಕಳೆದುಕೊಂಡಿರುವ ಜನರು ಎರಡು ದಿನದಿಂದ ಹಾದಿ ಬೀದಿಯಲ್ಲಿ ಮಲಗಿ ಆಶ್ರಯ ಪಡೆಯುತ್ತಿದ್ದಾರೆ. ಕಿಂಗ್ ಮೊಹಮ್ಮದ್ VI ಜನರಿಗೆ ಆಹಾರ ಮತ್ತು ಇತರ ಸಹಾಯವನ್ನು ಮಾಡಲು ಮುಂದಾಗಿದ್ದಾರೆ.

6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ ನೂರಾರು ಬೃಹತ್ ಕಟ್ಟಡಗಳು, ಮನೆಗಳು ಧರಾಶಾಹಿಯಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ನೂರಾರು ಮಂದಿ ಸಿಲುಕಿದ್ದು, ಅವುಗಳಲ್ಲಿ ಬಹುತೇಕರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಸದ್ಯ ಬೃಹತ್ ಸಂಖ್ಯೆಯಲ್ಲಿ ರಕ್ಷಣಾ ಸಿಬ್ಬಂದಿಗಳು ಕಟ್ಟಡಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಲುಕಿರುವ ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *