
ಸಕಲೇಶಪುರ : ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ಶಾಲೆಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ತಾಲ್ಲೂಕಿನ ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಶಾಲೆಯ ಆವರಣದಲ್ಲಿ ಸಸ್ಯಸಂಪತ್ತನ್ನು ಬೆಳೆಸುವ ಮೂಲಕ ಶಿಕ್ಷಕರು ಮಕ್ಕಳಿಗೆ ಪರಿಸರದ ಅರಿವು ಮೂಡಿಸಬೇಕು. ಪರಿಸರ ಮಾಲಿನ್ಯದಿಂದಾಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರನ್ನು ಉಳಿಸಿ ಮತ್ತು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಮಾತನಾಡಿ,ಜೀವಿಶಾಸ್ತ್ರ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಸ್ಯ ಶ್ಯಾಮಲಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೆತ್ತೂರಿನ ಕೆಪಿಎಸ್ ಶಾಲೆ ಪ್ರಾಥಮಿಕದಿಂದ ಪದವಿ ಪೂರ್ವ ಶಿಕ್ಷಣದವರೆಗೂ ಶಾಲೆಯಲ್ಲಿ ಅವಕಾಶ ಇರುವುದರಿಂದ ಈ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಶಾಲೆಯಲ್ಲಿ ಸ್ಥಳಾವಕಾಶ ನೋಡಿಕೊಂಡು 50 ಸಸಿಗಳನ್ನು ನೆಟ್ಟು ಪೋಷಿಸಲು ಉದ್ದೇಶಸಲಾಗಿದೆ. ಮಕ್ಕಳು ಕಡಿಮೆ ಇದ್ದರೂ ಸ್ಥಳಾವಕಾಶ ಹೆಚ್ಚಿಗೆ ಇದ್ದರೆ ಪ್ರತಿಯೊಂದು ಮಗುವಿಗೆ ಒಂದು ಗಿಡದಂತೆ ಗಿಡವನ್ನು ನೀಡಿ ಅವರಿಂದಲೇ ಗಿಡ ನಡೆಸಿ, ಅವರೇ ಆರೈಕೆ ಮಾಡುವಂತೆ ನೋಡಿಕೊಳ್ಳಬೇಕು. ಇನ್ನು ಶಾಲೆಯಲ್ಲಿ ಮಕ್ಕಳು ಹೆಚ್ಚಾಗಿದ್ದು ಸ್ಥಳಾವಕಾಶ ಕೂಡ ಕಡಿಮೆ ಇದ್ದರೆ, ಪ್ರತಿ 2 ರಿಂದ 3 ಮಕ್ಕಳು ಒಂದು ಗಿಡವನ್ನು ನೆಟ್ಟು ಆರೈಕೆ ಮಾಡಿಕೊಳ್ಳುವಂತೆ ಮಕ್ಕಳ ಸುರಕ್ಷತೆಗೂ ಕೂಡ ಹೆಚ್ಚಿನ ಗಮನ ವಹಿಸಬೇಕು ಗುಂಡಿ ತೆಗೆಯುವಾಗ ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ಹಾನಿ ಕೂಡ ಉಂಟಾಗದಂತೆ ಶಾಲಾ ಮುಖ್ಯಸ್ಥರು ಎಚ್ಚರಿಕೆ ವಹಿಸಬೇಕು.ವಿದ್ಯಾರ್ಥಿಗಳ ಜೊತೆಗೆ ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಸ್ಥಳೀಯ ಸಂಸ್ಥೆಯ ಸದಸ್ಯರು, ಸ್ವಯಂಸೇವಾ ಸಂಘಗಳು ಹಾಗೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಕೂಡ ಸಹಕರಿಸಬೇಕು ಹಾಗಾದಾಗ ಮಾತ್ರ ಸಸ್ಯ ಶಾಮಲಾ ಯೋಜನೆ ಯಶಸ್ವಿಯಾಗುತ್ತದೆ.ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ನೆಡೆಸಿ ನಮ್ಮ ಶಾಲಾ ಶಿಕ್ಷಣ ಇಲಾಖೆ ಒಂದು ವರ್ಷಗಳಲ್ಲಿ 50 ಲಕ್ಷ ಮರ ಬೆಳೆಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಸಸ್ಯ ಶಾಮಲಾ ಯೋಜನೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಂಗಾಧರ್, ಎಸ್ ಡಿ ಎಂ ಸಿ ಉಪಾಧ್ಯಕ್ಷ ಶಶಿಧರ್, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್, ಹೆತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್ ಸೇರಿದಂತೆ ಮುಂತಾದವರಿದ್ದರು.

