
ಸಕಲೇಶಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ದಿನಾಂಕ: 20-09-2023 ನೇ ಬುಧವಾರ ಬೆಳಗ್ಗೆ 11ಗಂಟೆಗೆ ಸಕಲೇಶಪುರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಭೂಮಿ, ವಸತಿ, ನಾಗರೀಕ ಸೌಲಭ್ಯಗಳಿಗಾಗಿ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಪ್ರತಿಭಟನಾ ಧರಣಿಯನ್ನು ಮಾಡಲಾಗುತ್ತಿದೆ .
ಈ ಪ್ರತಿಭಟನಾ ಧರಣಿಗೆ ಎಲ್ಲಾ ಜಾತಿಯ ಬಡವರು, ಕೃಷಿ ಕೂಲಿಕಾರರು, ಕಾರ್ಮಿಕರು, ಭೂಹೀನ ದಲಿತರು ವಸತಿ ಮತ್ತು ನಾಗರೀಕ ಸೌಲಭ್ಯಗಳಿಂದ ವಂಚಿತರಾದ ಎಲ್ಲರೂ ಭಾಗವಹಿಸಬೇಕೆಂದು ತಾಲ್ಲೂಕು ದ ಸಂ ಸ ಸಂಯೋಜಕ ಧರ್ಮರಾಜ್ ಕಲ್ಗಣೆ, ಹಾಗೂ ಜಿಲ್ಲಾ ಸಂಚಾಲಕ ನಾಗರಾಜು ಜಾನಕೆರೆ ಅವರು ಮನವಿ ಮಾಡಿದ್ದಾರೆ.
ಹಕ್ಕೋತ್ತಾಯಗಳು 1. ಹಾನುಬಾಳು ಹೋಬಳಿ ದೊನಹಳ್ಳಿ ಗ್ರಾಮದಲ್ಲಿ 18 ಪರಿಶಿಷ್ಟ ಜಾತಿಯ ಕುಟುಂಬಗಳು ನೂರಾರು ವರ್ಷಗಳಿಂದ ಎಸ್ಟೇಟ್ ನ ಲೈನ್ ಮನೆಗಳಲ್ಲಿ ವಾಸವಿದ್ದು, ಈಗ ಬಿಡಬೇಕಾಗಿರುವ ಸಂದರ್ಭ ಬಂದಿದ್ದು ಸ್ವಂತ ನಿವೇಶನವಿಲ್ಲದೆ ಮನೆ ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ಎರಡು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ, ಪಂಚಾಯಿತಿಯಲ್ಲಿ ನಿವೇಶನ ಮತ್ತು ಮನೆ ಕೇಳುತ್ತಿದ್ದಾರೆ ,ಅವರುಗಳಿಗೆ ನಿವೇಶನ ಮತ್ತು ಮನೆ ಕಟ್ಟಿಸಿ ಕೊಡಬೇಕು.
2. ಹೆತ್ತೂರು ಗ್ರಾಮದಲ್ಲಿ 100 ಕುಟುಂಬ ಪರಿಶಿಷ್ಟ ಜಾತಿಯವರಿದ್ದು , ಅದರಲ್ಲಿ 40 ಕುಟುಂಬಗಳಲ್ಲಿ 3 ಕೋಣೆಯುಳ್ಳ ಮನೆಯೊಂದರಲ್ಲಿ 2-3 ಸಂಸಾರ ವಾಸವಾಗಿದ್ದು , ಇವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸಿಕೊಡಬೇಕು.
3. ಎಲ್ಲಾ ಹಳ್ಳಿಯ ಭೂಹೀನ ದಲಿತರನ್ನು ಗುರುತಿಸಿ ವ್ಯವಸಾಯ ಭೂಮಿ ಮಂಜೂರು ಮಾಡಿಕೊಡಬೇಕು.
4. ಎಲ್ಲಾ ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಕಾಯ್ದಿರಿಸಬೇಕು.
5 . ಬಗರ್ ಹುಕುಂ ಸಾಗುವಳಿ ಭೂಮಿ ಸಕ್ರಮಕರಣ ಸಮಿತಿ ರಚಿಸಿ ತ್ವರಿತ ಗತಿಯಲ್ಲಿ ಸಾಗುವಳಿದಾರರಿಗೆ ಭೂಮಿ ಕೊಡಬೇಕು.
6. ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಸ.ನಂ.26 ರಲ್ಲಿ 8 ಎಕರೆ ಭೂಮಿ ಇದ್ದು, 2 ಎಕರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನಕ್ಕೆ , ಉಳಿದ 6 ಎಕರೆ ಅಲ್ಲಿಯ ನಿವೇಶನ ರಹಿತರಿಗೆ ಕಾಯ್ದಿರಿಸಿಬೇಕು .
7. ಸಕಲೇಶಪುರ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ರಹಿತ ದಲಿತರನ್ನು ಗುರುತಿಸಿ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸಿಕೊಡಬೇಕು.
8. ನಗರದ ಕುಶಾಲನಗರ ಬಡಾವಣೆಯಲ್ಲಿ ಬಡವರಿಗೆ ಮತ್ತು ಪೌರ ಕಾರ್ಮಿಕರ ಬಡಾವಣೆಯಲ್ಲಿ ಪೌರ ಕಾರ್ಮಿಕರಿಗೆ ಸ್ಲಂ ಬೋರ್ಡ್ ನಿಂದ ಮನೆ ನಿರ್ಮಿಸುತ್ತಿದ್ದು, ಇಲ್ಲಿಗೆ ಐದು ವರ್ಷಗಳಾದರೂ ಪೂರ್ಣಗೊಂಡಿಲ್ಲ , ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಿ ಅವರುಗಳಿಗೆ ವಾಸಕ್ಕೆ ಅನುವು ಮಾಡಿಕೊಡಬೇಕು.
9. ಮಳಲಿ ಗ್ರಾಮದ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಪರಿಶೀಲಿಸಿ ಘನ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣ ಕಟಕ ಬೇರೆಡೆಗೆ ಸ್ಥಳಾಂತರಿಸಬೇಕೆಂದು ದಸಂಸ ಒತ್ತಾಯಿಸುತ್ತದೆ.
