
ಸಕಲೇಶಪುರ : ಕಂದಾಯ ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಕಡತಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗಲು ಇ- ಆಫೀಸ್ ತಂತ್ರಾಂಶವನ್ನು ಇಂದಿನಿಂದ ಜಾರಿಗೆ ತರಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಇ- ಆಫೀಸ್ ಗೆ ಬುದವಾರ ಚಾಲನೆ ನೀಡಿ ಮಾತನಾಡಿ ತಾಲೂಕು ಕಚೇರಿಯಲ್ಲಿ ಆಗ ಬೇಕಾಗಿರುವ ಎಲ್ಲಾ ಸೇವೆಗಳು ಇ-ಆಫೀಸ್ ಮೂಲಕವೇ ಆಗಲಿವೆ. ಇದರಿಂದ ಜನರು ವಿನಾ ಕಾರಣ ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದರು.
ಜನಸಾಮಾನ್ಯರು ಮಿನಿವಿಧಾನಸೌಧದ ಆವರಣದಲ್ಲಿರುವ ಇ-ಆಪೀಸ್‌ನಲ್ಲಿ ಅರ್ಜಿ ನೀಡಿದರೆ ಸಾಕು, ಕಡತ ನೀಡಿದಕ್ಕೆ ಸ್ವೀಕೃತಿ ರಸೀದಿ ನೀಡಲಾಗುತ್ತದೆ. ಗ್ರಾಮಾಂತರ ಪ್ರದೇಶಗಳ ಜನ ಗಂಟೆಗಟ್ಟಲೆ ಕೇವಲ ಅರ್ಜಿಗಳನ್ನು ನೀಡಲು ಕಾಯುವುದು ತಪ್ಪುತ್ತದೆ. ಸಾರ್ವಜನಿಕರಿಗೆ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ತರ ಉದ್ದೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ತಹಸೀಲ್ದಾರ್ ಜಿ. ಮೇಘನಾ ಮಾತನಾಡಿ,ರಾಜ್ಯ ಸರ್ಕಾರದ ಮತ್ತು ಕಂದಾಯ ಇಲಾಖೆಯ ಆದೇಶದಂತೆ ಸ್ಥಾಪಿಸಲಾಗುತ್ತಿರುವ ಇ ಆಫೀಸ್ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಪೂರಕವಾಗಲಿದೆ.ತಾಲ್ಲೂಕಿನ ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಇ ಆಫೀಸ್ ತೆರಯಲಾಗಿದ್ದು, ಶಾಸಕರಾದ ಸಿಮೆಂಟ್ ಮಂಜುರವರು ಇದಕ್ಕೆ ಚಾಲನೆ ನೀಡಿದ್ದಾರೆ.
ಸಾರ್ವಜನಿಕರಿಂದ ಅರ್ಜಿಗಳನ್ನು ಇಲ್ಲಿಯೇ ಪಡೆಯಲಾಗುತ್ತದೆ. ಜೊತೆಗೆ ಸಾರ್ವಜನಿಕರಿಗೆ ಕಡತಗಳ ವಿಲೇವಾರಿಗೆ ವಿಳಂಬವಾಗದಂತೆ ಶೀಘ್ರದಲ್ಲೇ ಕ್ರಮವಹಿಸಲು ಅನುಕೂಲವಾಗಲಿದೆ. ಜೊತೆಗೆ ಸಾರ್ವಜನಿಕರು ವಿವಿಧ ಕೆಲಸಗಳಿಗೆ ಸಲ್ಲಿಸುವ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿಯಬಹುದು. ಜೊತೆಗೆ ಪ್ರಾರಂಭದ ಕೆಲದಿಗಳನಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಈ ಸಂಧರ್ಭದಲ್ಲಿ ಶಿರಸ್ತೇದಾರ್ ಉಮೇಶ್, ಚುನಾವಣೆ ಶಾಖೆಯ ಶಿರಸ್ತೇದಾರ್ ಶ್ವೇತಾ ಸೇರಿದಂತೆ ಇತರರು ಹಾಜರಿದ್ದರು.
20ಎಸ್.ಕೆ.ಪಿ.ಪಿ 2 ಸಕಲೇಶಪುರ ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಇ- ಆಫೀಸ್ ಗೆ ರಿಬ್ಬನ್ ಕಟ್ ಮಾಡುವುದರ ಮುಖಾಂತರ ಶಾಸಕ ಸಿಮೆಂಟ್ ಮಂಜು ಬುಧವಾರ ಚಾಲನೆ ನೀಡಿದರು.
