
ಪ್ರೀತಿಸಿದ ಹುಡುಗ ಮೋಸ ಮಾಡಿದ ಎಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.ಆಶಾ (20) ಮೃತ ವಿದ್ಯಾರ್ಥಿನಿ.
ಆಶಾ ಬೇಲೂರಿನ ಸರ್ಕಾರಿ ವೈಡಿಡಿ ಪದವಿ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ಪದವಿ ಓದುತ್ತಿದ್ದಳು.ಆಕೆ ತನ್ನ ಪಿಯುಸಿ ಕ್ಲಾಸ್ಮೇಟ್ ಆಲೂರು ಮೂಲದ ಮಂಜುನಾಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆಶಾಳೊಂದಿಗೆ ಆತ ಪ್ರತಿದಿನ ಸುತ್ತಾಡುತ್ತಿದ್ದ. ಇತ್ತೀಚೆಗೆ ಇದೇ ಮಂಜುನಾಥ ಬೇರೊಂದು ಹುಡುಗಿ ಜೊತೆ ತಿರುಗಾಟ ಶುರು ಮಾಡಿದ್ದ.ಇದನ್ನು ಗಮನಿಸಿದ ಆಶಾ, ಮಂಜುನಾಥನನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಳು.
ನೀನು ನನ್ನನ್ನು ಹೀಗೆಲ್ಲಾ ಪ್ರಶ್ನೆ ಮಾಡಬೇಡ. ಪ್ರಶ್ನಿಸಿದರೆ ಕೊಲೆ ಮಾಡುತ್ತೇನೆ. ಅಷ್ಟೇ ಅಲ್ಲ, ನೀನು ನನ್ನೊಂದಿಗೆ ಸುತ್ತಾಡಿರುವ ಫೋಟೋ, ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ, ನಿಂದಿಸಿದ್ದ ಎಂಬ ಆರೋಪ ಕೇಳಿಬಂದಿದೆ.ಇದರಿಂದ ಮನನೊಂದ ಆಶಾ ಅಕ್ಟೋಬರ್ 6ರಂದು ಕಾಲೇಜಿನ ಬಳಿ ವಿಷ ಕುಡಿದಿದ್ದಳು. ಇದನ್ನು ಗಮನಿಸಿದ ಮಂಜುನಾಥ, ಆಶಾಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಆಶಾ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಒಂದು ವಾರಗಳಿಗೂ ಅಧಿಕ ಕಾಲ ಸಾವು, ಬದುಕಿನ ನಡುವೆ ಹೋರಾಟ ನಡೆಸಿದ ಆಶಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ.
ಘಟನೆಗೆ ಸಂಬಂಧಿಸಿ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಮಂಜುನಾಥನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಂದೆ ರಾಮಯ್ಯ ಬೇಲೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
