
ಹಾಸನ :-ನಮ್ಮ ಆಹಾರವೇ ನಮ್ಮ ಭವಿಷ್ಯ ಈ ನಿಟ್ಟಿನಲ್ಲಿ ಯುವ ಜನತೆ ಜಾಗೃತೆವಹಿಸಬೇಕೆಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್.ಕೆ. ಲೀಲಾವತಿ ಕರೆ ನೀಡಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿಯೊಂದ್ದು ತುತ್ತು ಆಹಾರವು ರೈತರ ಬೆವರಿನ ಫಲ. ಈ ನಿಟ್ಟಿನಲ್ಲಿ ಅಗತ್ಯವಿದ್ದಷ್ಟು ಆಹಾರವನ್ನ ಮಾತ್ರ ಬಳಸಬೇಕು.
ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಪೋಷಕಾಂಶಯುಕ್ತ ಆಹಾರ ಬಳಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಂಕ್ ಫುಡ್ ಸಂಸ್ಕೃತಿ ಒಳ್ಳೆಯದಲ್ಲ, ಅದು ತಾತ್ಕಾಲಿಕವಷ್ಟೆ. ಆಹಾರಕ್ಕೆ ನೀಡಿದಷ್ಟೇ ಮಹತ್ವವನ್ನ ನಾವು ನೀರಿಗೂ ನೀಡುವ ಪರಿಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮದುವೆ ಶುಭ ಸಮಾರಂಭ ಸೇರಿದಂತೆ ಸಾಮಾಹಿಕ ಭೋಜನ ಕಾರ್ಯಕ್ರಮಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಕಾಲೇಜು ವತಿಯಿಂದ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಹೇಳಿದರು.
ಹೆಚ್ಚಿನ ಆಹಾರ ಪದಾರ್ಥಗಳು ಔಷಧಿಯ ಗುಣಹೊಂದಿದ್ದು, ಮಧುಮೇಹ, ರಕ್ತದೊತ್ತಡ, ದೃಷ್ಟಿ ದೋಷ ಸೇರಿದಂತೆ ಹಲವು ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀಮತಿ ಫಕೀರಮ್ಮ ಪಿ. ಮುರಗೋಡ ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಯುವ ಜನತೆಗೆ ಆಹಾರದ ಮಹತ್ವ ತಿಳಿಸುವಲ್ಲಿ ಇದೊಂದು ಮಹತ್ವಪೂರ್ಣ ಕಾರ್ಯಕ್ರಮವೆಂದು ಭಾರತೀಯ ಭಾಷಾ ಪತ್ರಿಕೆಗಳ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ.ಉದಯ ರವಿ ಅಭಿಪ್ರಾಯಪಟ್ಟರು.
ಭರ್ಜರಿ ವ್ಯಾಪಾರ : ಇದೇ ವೇಳೆ ಕಾಲೇಜಿನ ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸುಮಾರು ಇಪ್ಪತ್ತು ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಪೋಷಕಾಂಶಯುಕ್ತ ವಿವಿಧ ಬಗೆಯ ಲಸ್ಸಿಗಳು, ಮಿಲ್ಕ್ ಶೇಕ್, ತಂಪು ಪಾನೀಯ ತಯಾರಿಸಿ ಮಾರಾಟ ಮಾಡುವ ಮೂಲಕ ಅರಿವು ಮೂಡಿಸಿದರು.
ಕಾಲೇಜಿನ ಹೆಚ್ಚು ವಿದ್ಯಾರ್ಥಿಗಳು ಹೊಸ ಬಗೆಯ ವರ್ಣ ರಂಜಿತ ಜ್ಯೂಸ್ ಗಳನ್ನು ಸವಿಯುವುದರೊಂದಿಗೆ ಮಾಹಿತಿ ಪಡೆದುಕೊಂಡರು. ಬಂದವರು ವಿವಿಧ ಜ್ಯೂಸ್ ಗಳನ್ನು ಸೇವಿಸುವ ಮೂಲಕ ವಿದ್ಯಾರ್ಥಿಗಳ ವ್ಯಾಪಾರಕ್ಕೆ ಪ್ರೋತ್ಸಹಿಸಿದರು. ಜಾಗೃತಿ ಜಾತಾ: ಇದಕ್ಕೂ ಮುನ್ನ ನಡೆದ ಜಾಗೃತಿ ಜಾತಾಕ್ಕೆ ಪ್ರಾಂಶುಪಾಲರಾದ ಪ್ರೊ. ಎನ್.ಕೆ. ಲೀಲಾವತಿ ಚಾಲನೆ ನೀಡಿದರು.
ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಾತಾದಲ್ಲಿ ಪಾಲ್ಗೊಂಡು, ಆಹಾರ ಮತ್ತು ಪೋಷಕಾಂಶ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಐ.ಕ್ಯು.ಎಸ್.ಸಿ. ಸಹ-ಸಂಯೋಜಕರಾದ ಡಾ. ಮಧುಮತಿ, ಪ್ರೊ.ಶಿವಮೂರ್ತಿ, ಪುಟ್ಟರತ್ನಮ್ಮ, ವಾಣಿಜ್ಯ ವಿಭಾಗದ ರಘು, ಸ್ಪೂರ್ತಿ, ಕಾವ್ಯ, ಗ್ರಂಥಪಾಲಕರಾದ ನಾಗರಾಜು, ಪಾಲ್ಗೊಂಡಿದ್ದರು.



