
ಚನ್ನರಾಯಪಟ್ಟಣ: ಮನುಷ್ಯನ ದ್ವೇಷ ಕ್ಷೇಶಗಳು ದೂರವಾಗಿ ನಾಡಿನೆಲ್ಲೆಡೆ ಮಳೆ ಬಿದ್ದು ಬೆಳೆಯಾಗಲಿ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವದಿಸಿದರು.
ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂದೂರುಮಠದಲ್ಲಿ ನವರಾತ್ರಿ ಉತ್ಸವಕ್ಕೆ ವಿಜಯದಶಮಿ ಶುಭ ದಿನವಾದ ಮಂಗಳವಾರದಂದು ನವರಾತ್ರಿ ಉತ್ಸವಕ್ಕೆ ತೆರೆ ಎಳೆದರು.
ಬನ್ನಿ ಕಡಿದು ಮಠದ ಪಟ್ಟದ ಕುದುರೆ, ಹಸುವಿನೊಂದಿಗೆ ಕ್ಷೇತ್ರದ ಸುಬ್ರಹ್ಮಣ್ಯ ದೇವಸ್ಥಾನದಿಂದ ಕ್ಷೇತ್ರದ ಅಧಿದೇವತೆಗಳಾದ ರಂಗನಾಥ ಸ್ವಾಮಿ ಮತ್ತು ಮೆಳೆಯಮ್ಮನನ್ನು ಆಡೆಯಲ್ಲಿ ರಸಾರ್ದರದೊಂದಿಗೆ ಹೊರ ವಲಯದಲ್ಲಿಗೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣಕ್ಕೆ ಕರೆತಂದು ಬನ್ನಿ ಮರದ ಮುಂಭಾಗದಲ್ಲಿ ಹಾಕಲಾಗಿದ್ದ ಮಂಟಪದಲ್ಲಿ ಇರಿಸಲಾಯಿತು.
ಬೆಳಗ್ಗೆ ಆಗಮಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭಕ್ತರು ಪೂರ್ಣಕುಂಭ ಕಳಶದೊಂದಿಗೆ ಸ್ವಾಗತಿಸಲಾಯಿತು. ನಂತರ ಶ್ರೀಗಳು ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು,
ಶ್ರೀಮಠದ ಪದ್ದತಿಯಂತೆ ಅವರಿಗೆ ಬೆಳ್ಳಿ ಕಿರೀಟ, ವಿಶೇಷ ಆಭರಣ ತೊಟ್ಟ ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ನಾದದೊಂದಿಗೆ ಕರೆತರಲಾಯಿತು.
ರಂಗನಾಥ ಸ್ವಾಮಿ, ಮೆಳಿಯಮ್ಮ ದೇವಿಗೆ ಮಹಾಮಂಗಳಾರತಿ ನೆರವೇರಿಸಿಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮರವನ್ನು ಮೂರು ಸುತ್ತು ಪ್ರದಕ್ಷಿಣೆ ಸುತ್ತಿದ ನಂತರ ಕತ್ತಿಯಿಂದ ಬನ್ನಿ ಕಡಿದರು. ಈ ಸಂದರ್ಭ ನೆರೆದಿದ್ದ ನೂರಾರು ಭಕ್ತರು ಜೈಕಾರದ ಘೋಷ ಕೂಗಿದರು.
ಈ ಸಂದರ್ಭ ಮಾತನಾಡಿದ ನಿರ್ಮಲಾನಂದನಾಥ ಶ್ರೀಗಳು ಎಲ್ಲ ದೋಷಗಳನ್ನು ಹೋಗಲಾಡಿಸುವ ಉದ್ದೇಶದಿಂದ 9 ದಿನಗಳು ದೇವಿಯನ್ನು ಆರಾಧಿಸಿ ಸಾಧನೆಗೈದ ಭಕ್ತರು 10 ದಿನ ತಮ್ಮ ಅಂತರಂಗ ಶುದ್ಧಿಯನ್ನು ಜಯಿಸುವ ದಿನ ವಿಜಯದಶಮಿ, ಮಹಿಷಾಸುರನನ್ನು ಮರ್ದಿಸಿದ ಭಗವತಿಯು ಜಗತ್ತಿನ ಎಲ್ಲರ ಅಂತರಂಗ ಮತ್ತು ಸಮಾಜದ ದೋಷವನ್ನು ಹೋಗಲಾಡಿಸಿ, ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳುವ ದಿನವನ್ನು ತಾಯಿ ಚಾಮುಂಡಿ ಕರುಣಿಸಿ, ಮಳೆ ಬೆಳೆ ಸಂತೃಪ್ತಿಯಾಗಿ ನಾಡಿನ ರಕ್ಷಣೆಯಾಗಲಿ ಎಂದು ಪ್ರಾರ್ಥಿಸಿ, ಎಲ್ಲೆಡ ಶಾಂತಿ ನೆಮ್ಮದಿಯನ್ನು ತಂದು ಸರ್ವರ ಏಳೆಗೆ ಈ ವಿಜಯದಶಮಿ ಕಾರಣವಾಗಲಿ ಎಂದು ಆಶೀರ್ವದಿಸಿದರು.
ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಿವಪುತ್ರನಾಥ ಸ್ವಾಮೀಜಿ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್.ಅಶೋಕ್, ಜಗದೀಶ್, ಪೂರ್ಣಿಮ ವೆಂಕಟೇಶ್, ಹಾಗೂ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಶ್ರೀಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಸೇರಿ ಇತರರು ಇದ್ದರು.




