
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ “ಅಜೋಲಾ ಕೃಷಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪ್ರಮುಖ ಉಪಕಸುಬುಗಳಲ್ಲಿ ಒಂದಾದ ಅಜೋಲಾ ಕೃಷಿಯನ್ನು ಗ್ರಾಮಸ್ಥರಿಗೆ ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ಇದನ್ನು ಭತ್ತದ ಗದ್ದೆಯಲ್ಲಿ, ಕೃಷಿ ಹೊಂಡ ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಬೆಳೆಸಬಹುದು.
ಅಜೋಲ ಬೆಳೆಸಲು 10 ಅಡಿ ಉದ್ದ,5 ಅಡಿ ಅಗಲ,1 ಅಡಿ ಆಳದ ಗುಂಡಿ ತೆಗೆಯಬೇಕು. ಇದನ್ನು ಚಪ್ಪರ ಅಥವಾ ಶೇಡ್ ನೆಟ್ ಕೆಳಗೆ ಬೆಳೆಸಬೇಕು. ಗುಂಡಿಗೆ ಪಾಲಿತಿನ್ ಶೀಟ್ ಹರಡಬೇಕು ನಂತರ 10ಕೆಜಿ ಸೋಸಿದ ಕೆಂಪು ಮಣ್ಣನ್ನು ಸಮನಾಗಿ ಹರಡಿ,20 ಲೀಟರ್ ನೀರಿಗೆ 5ಕೆಜಿ ಸಗಣಿಯನ್ನು ಮಿಶ್ರಣ ಮಾಡಿ ಗುಂಡಿಗೆ ಸೇರಿಸಬೇಕು.
1/2ಕೆಜಿ ತಾಯಿ ಅಜೋಲವನ್ನು ನೀರಿನ ಮೇಲೆ ಸಮನಾಗಿ ಹರಡಬೇಕು. ಒಂದು ಮುಷ್ಠಿ ಅಷ್ಟು SSP ಅಥವಾ DAP ಅನ್ನು ಸೇರಿಸಬೇಕು.10 ದಿನಗಳ ನಂತರ ತೊಟ್ಟಿಯ ತುಂಬಾ ಬೆಳೆದಿರುತ್ತದೆ. ದಿನಕ್ಕೆ 1 ರಿಂದ 1.5ಕೆಜಿ ಅಷ್ಟು ಇಳುವರಿಯನ್ನು ಪಡೆಯಬಹುದು. ಇದನ್ನು ಹಸುಗಳಿಗೆ ಮೇವಾಗಿ ಬಳಸಿದರೆ ಹಾಲಿನ ಪ್ರಮಾಣ ಹಾಗೂ ಕೊಬ್ಬಿನಂಶ ಹೆಚ್ಚಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಡಾ||ಪ್ರಮೋದ.ಜಿ ಬೇಸಾಯ ಶಾಸ್ತ್ರ ವಿಭಾಗ ಹಾಗೂ ಗ್ರಾಮಸ್ಥರಾದ ಕಾಳೆಗೌಡ, ಶಿವೇಗೌಡ, ಪದ್ಮರಾಜ್, ಪಾರ್ವತಮ್ಮ, ಶೋಭಾ, ಮುಂತಾದವರು ಪಾಲ್ಗೊಂಡಿದ್ದರು. ಡಾ||ಪ್ರಮೋದ.ಜಿ ಅವರು ಅಜೋಲಾ ಕೃಷಿಯ ಮಹತ್ವ, ಉಪಯೋಗದ ಬಗ್ಗೆ ತಿಳಿಸಿದರು.
